
ನಂಜನಗೂಡು; ಜನರ ಕಷ್ಟವನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಕಾಂಗ್ರೆಸ್ ಸರ್ಕಾರ ಪ್ರಜಾ ಸೇವಾ ಕಾರ್ಯಕ್ರಮವನ್ನು ರೂಪಿಸಿ ಜನರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲು ಮುಂದಾಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಇಲಾಖೆಗಳಿಗೆ ಅಲೆಸುವುದನ್ನು ತಪ್ಪಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹರಿಸುವ ಸಲುವಾಗಿ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಸ್ಥಾಪಿಸಿದೆ, ಈ ಕಾರ್ಯಕ್ರಮವು ಪ್ರತಿ ತಿಂಗಳ ಮೊದಲನೇ ಶನಿವಾರ ಮತ್ತು ಮೂರನೇ ಶನಿವಾರದಂದು ತಾಲೂಕು ಮಟ್ಟದ ಕೇಂದ್ರ ಹಾಗೂ ಹೋಬಳಿ ಪಂಚಾಯಿತಿ ಮಟ್ಟದಲ್ಲಿ ನಿರಂತರವಾಗಿ ಜರಗಲಿದೆ, ಈ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಯಾರಿಸುವಂತೆ ಈಗಾಗಲೇ ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ, ಇಲ್ಲಿ ನೋಂದಾವಣೆಯಾದ ಅರ್ಜಿಗಳನ್ನು ಮೂರು ದಿನಗಳಲ್ಲಿ ಪರಿಹರಿಸುವಂತೆ ನಿಬಂಧನೆಗಳಿವೆ, ಮತ್ತು ಅರ್ಜಿಗಳ ವಿಲೇವಾರಿಗಾಗಿ ಜಿಲ್ಲಾಧಿಕಾರಿಗಳು ಮತ್ತು ಜವಾಬ್ದಾರಿ ವಹಿಸಿಕೊಂಡ ಕಾರ್ಯದರ್ಶಿಗಳು ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಜವಾಬ್ದಾರಿ ವಹಿಸಿಕೊಂಡ ಕಾರ್ಯದರ್ಶಿಗೆ ವಸತಿ ಶಾಲೆ, ಆಸ್ಪತ್ರೆ, ವಸತಿ ನಿಲಯಗಳಿಗೆ ದಿಡೀರ್ ಭೇಟಿ ನೀಡಿ ಸೇವೆಯನ್ನು ಉತ್ತಮಪಡಿಸುವ ಅಧಿಕಾರವನ್ನು ನೀಡಲಾಗಿದೆ, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಈ ಕಾರ್ಯಕ್ರಮ ಹೊಸದಲ್ಲ, ಏಕೆಂದರೆ ಪ್ರತಿ ಸೋಮವಾರ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುವುದನ್ನು ನಾವು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ, ಇನ್ನು ಮುಂದೆ ಸಾರ್ವಜನಿಕರ ಅಹವಾಲನ್ನು ಸೋಮವಾರದ ಬದಲಾಗಿ ಶನಿವಾರದಂದೆ ನಿರ್ವಹಿಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಸಿಕೊಂಡು, ಸಾರ್ವಜನಿಕರ ಸಂಕಷ್ಟಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ ಆದ್ದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಸಾರ್ವಜನಿಕರ ಸಂಕಷ್ಟವನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.
ತಹಸಿಲ್ದಾರ್ ಡಾ. ಸ್ಮಿತಾ ರಾಮು ಮಾತನಾಡಿ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ, ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ತಾಪಂ ಇಒ ಜೆರಾಲ್ಡ್ ರಾಜೇಶ್, ನಗರಸಭಾ ಆಯುಕ್ತ ಬಸವರಾಜು, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.