Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

9 ಕೋಟಿ ವೆಚ್ಚದಲ್ಲಿ ಶ್ರೀ ಮಸಣಿಕಮ್ಮ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ.ಕೆ.ವೆಂಕಟೇಶ್

​   ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಮಸಣಿಕಮ್ಮ ದೇವಾಲಯದ ಪುನರ್‌ನಿರ್ಮಾಣ ಹಾಗೂ ಜೀರ್ಣೋದ್ಧಾರ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ದೇವಾಲಯದ ಅಭಿವೃದ್ಧಿಯೇ ಮುಖ್ಯ ಉದ್ದೇಶ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಮಸಣಿಕಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ದೇವಾಲಯದ ಜೀರ್ಣೋದ್ಧಾರಕ್ಕೆ ಅಗತ್ಯವಿದ್ದರೆ ಸರ್ಕಾರದಿಂದ ಹೆಚ್ಚುವರಿ ಹಣಕಾಸಿನ ನೆರವು ಕೊಡಿಸಲು ಸಿದ್ಧನಿದ್ದೇನೆ. ಪಟ್ಟಣದ ಜನರೂ ಸಂಪೂರ್ಣ ಸಹಕಾರ ನೀಡಬೇಕು ದೇವಾಲಯವು ಭಕ್ತಾದಿಗಳ ಸ್ವತ್ತು. ದೇವಾಲಯ ನಿರ್ಮಾಣ ಚಿಕ್ಕದಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು. ಸುಮಾರು 3.2 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ರೂ. 9.19 ಕೋಟಿ ವೆಚ್ಚದಲ್ಲಿ ಭವ್ಯ ಹಾಗೂ ಸುಂದರ ದೇವಾಲಯ ನಿರ್ಮಾಣವಾಗಲಿದೆ ಎಂದ ಅವರು, 

ದೇವಾಲಯ ಸುತ್ತಮುತ್ತಲಿನ ಅಕ್ರಮ ಮನೆ, ಮಳಿಗೆಗಳ ನಿರ್ಮಿಸಿಕೊಂಡಿರುವುದರ ತೆರವು ಕಾರ್ಯವನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಕೈಗೊಳ್ಳಲಾಗುವುದು. ಈಗಾಗಲೇ ಪುರಸಭೆಯಲ್ಲಿ ರೂ.2 ಕೋಟಿಗೂ ಅಧಿಕ ಹಣ ಲಭ್ಯವಿದ್ದು, ಈ ಹಿಂದೆ ನಿರ್ಮಿಸಲಾಗಿದ್ದ ತೇರಿನ ಬೀದಿಯ ಮಳಿಗೆಗಳನ್ನು ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ನಿರ್ಮಾಣ ಮಾಡಲಾಗುವುದು. ದಾಸೋಹ ಭವನ, ಯಾತ್ರಿನಿವಾಸ ಸೇರಿದಂತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸ್ವಯಂಪ್ರೇರಿತರಾಗಿ ಜಾಗ ಬಿಟ್ಟುಕೊಡಿ:

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ ದೇವಾಲಯದ ಜಾಗದಲ್ಲಿ ಅಕ್ರಮವಾಗಿ ನೆಲೆಸಿರುವವರು ತಮ್ಮ ಬಳಿ ಇರುವ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರೆ ನಿಯಮಾನುಸಾರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾರೂ ಅನಗತ್ಯ ಗೊಂದಲಗಳಿಗೆ ಅವಕಾಶ ನೀಡದೆ ಸ್ವಯಂಪ್ರೇರಿತರಾಗಿ ಜಾಗವನ್ನು ಬಿಟ್ಟುಕೊಡಲು ಮುಂದಾಗಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು.

ಗುತ್ತಿಗೆದಾರರು ಮಾತನಾಡಿ ಸುಮಾರು 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಪೂರ್ವಸಿದ್ಧತೆ ನೆಡೆದಿದೆ. ಪ್ರಸ್ತುತ ಇರುವ ಹಳೆಯ ದೇವಾಲಯದ ಕಂಬಗಳನ್ನು ಪುನರ್‌ನಿರ್ಮಾಣ ಕಾಮಗಾರಿಗೆ ಬಳಸುವುದಿಲ್ಲ. ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುವುದು. ಭವಿಷ್ಯದಲ್ಲಿ ಮುಜರಾಯಿ ಇಲಾಖೆ ಅನುಮತಿ ಪಡೆದು ಬೇರೆ ಚಿಕ್ಕ ದೇವಾಲಯಗಳಲ್ಲಿ ಬಳಸಬಹುದಾಗಿದೆ ಎಂದರು

ಈ ಸಂದರ್ಭದಲ್ಲಿ ಜಿ. ಪಂ. ಸಿಇಒ ಯುಕೇಶ್ ಕುಮಾರ್, ತಾಲ್ಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಶೀಲ್ದಾರ್ ನಿಸರ್ಗಪ್ರಿಯ, ಇ.ಒ ಡಿ.ಬಿ. ಸುನೀಲ್ ಕುಮಾರ್, ಪಿಡಬ್ಲ್ಯೂ ಎಇಇ ಯೋಗಾನಂದ್,  ಪುರಸಭೆ ಮುಖ್ಯಾಧಿಕಾರಿ ಎಚ್. ಪಿ.ಮಧು, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಮುಖಂಡರಾದ ಬಿ.ಜೆ. ಬಸವರಾಜ್, ಸುರೇಶ್, ಪಿ. ಮಹದೇವ್, ಅಶೋಕ್ ಕುಮಾರ್ ಸೇರಿದಂತೆ ಉಪ್ಪಾರ ಬೀದಿ, ಒಳಕೋಟೆ, ದೇವೇಗೌಡನ ಕೊಪ್ಪಲು ಹಾಗೂ ಕರಿಬಸಪ್ಪ ಲೇಔಟ್ ನಿವಾಸಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು