
ಸರಗೂರು: ಕಾಡಾನೆ ದಾಳಿಗೆ ವೃದ್ಧರೊಬ್ಬರು ಸಾವಿಗೀಡಾಗಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ ಬಳಿ ಸೋಮವಾರ ನಡೆದಿದೆ. ಗ್ರಾಮದ ನಿವಾಸಿ ವೀರಭದ್ರೆಗೌಡ (60) ಕಾಡಾನೆ ದಾಳಿಗೆ ಮೃತಪಟ್ಟವರು.
ಇಂದು ಬೆಳಗ್ಗೆ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಲು ಬೈಕ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಗೆರೆ ಗ್ರಾಮದ ಬಳಿ ಕಾಡಾನೆ ಹಠಾತ್ತನೆ ದಾಳಿ ನಡೆಸಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವೀರಭದ್ರೆಗೌಡ ಅವರನ್ನು ವಿಷಯ ತಿಳಿದ ಅರಣ್ಯಾಧಿಕಾರಿಗಳು ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ವೀರಭದ್ರೆಗೌಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.