
ಮೈಸೂರು; ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ದಿವಸ್‌ನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿಂದಿ ಭಾಷೆಯ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಉಮೇಶ್ ಮಾತನಾಡಿ, ಹಿಂದಿ ಭಾಷೆಯು ದೇಶದ ವಿವಿಧ ಭಾಗಗಳ ಜನರನ್ನು ಸಂಪರ್ಕಿಸುವ ಪ್ರಮುಖ ಭಾಷೆಯಾಗಿದ್ದು, ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಆಸಕ್ತಿಯಿಂದ ಕಲಿಯಬೇಕೆಂದು ಹೇಳಿದರು. ಹಿಂದಿ ಸಾಹಿತ್ಯದ ವೈವಿಧ್ಯತೆ, ಭಾಷೆಯ ಸಾಂಸ್ಕೃತಿಕ ಮಹತ್ವದ ಕುರಿತು ತಿಳಿಸಿ, ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖ ಕವಿಗಳ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಚ್. ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕೆಂದು ತಿಳಿಸಿದರು. ಮಾತೃ ಭಾಷೆಯಾದ ಕನ್ನಡವನ್ನು ಚೆನ್ನಾಗಿ ಅರಿತರೆ, ಇತರೆ ಭಾಷೆಗಳನ್ನು ಕಲಿಯುವುದು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಎಲ್ಲಾ ಭಾರತೀಯ ಭಾಷೆಗಳನ್ನು ಗೌರವಿಸುವ ಮೂಲಕ ಭಾಷಾ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಭಾಷಾ ಜ್ಞಾನವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದಿ ಉಪನ್ಯಾಸಕಿ ಸುಷ್ಮಾ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ನೇಹಲ್ ಸಾಯಿ , ಐಶ್ವರ್ಯ, ಪೂರ್ವಿಕ್ ಮತ್ತಿತರರು ಹಾಜರಿದ್ದರು.