
ನಂಜನಗೂಡು :
ರಾಜ್ಯದಲ್ಲಿ ತೀವ್ರ ಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ ವ್ಯಾಪ್ತಿಯ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಮನ್ನಾ ಮಾಡಬೇಕು, ಹಾಗೂ ಹುಲ್ಲಹಳ್ಳಿ, ರಾಂಪುರ, ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಜಮಾವಣೆಗೊಂಡ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬರಪಿಡಿತ ಪ್ರದೇಶದ ವ್ಯಾಪ್ತಿಯ ರೈತರು ಪಡೆದಿರುವ ಬೆಳೆ ಸಾಲಗಳನ್ನು ಸಹ ಮನ್ನಾ ಮಾಡಿ, ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಮುಂದಾಗಬೇಕು, ಎನ್.ಡಿ.ಆರ್.ಎಫ್.ಮತ್ತು ಎಸ್.ಡಿ.ಆರ್.ಎಫ್ ಮಾನದಂಡ ವೈಜ್ಞಾನಿಕವಾಗಿ ಮತ್ತು ಪ್ರಸ್ತುತ ಸನ್ನಿವೇಶಕ್ಕೆ ಅನುಕೂಲವಾದ ರೀತಿಯಲ್ಲಿ ಮಾರ್ಪಾಡು ಮಾಡಬೇಕು. ರಾಜ್ಯದಲ್ಲಿ ಇರುವಂತಹ ಮುಖ್ಯಮಂತ್ರಿಯಿಂದ ಶಾಸಕರ ತನಕ ಮತ್ತು ರಾಜ್ಯದಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರು ಎಲ್ಲರೂ ಸಹ ತಮ್ಮ ಸಂಬಳ ಸಾರಿಗೆ ವೈಭವಿತ ಜೀವನವನ್ನು ಭರದ ನಡುವೆ ನಡೆಸುತ್ತಿದ್ದಾರೆ, ಬರದ ಅಧ್ಯಯನದ ಖರ್ಚನ್ನು ಸಹ ಸರ್ಕಾರದಿಂದ ಪಡೆಯುತ್ತಾರೆ, ಮೂರು ದಿನದ ಅಧಿವೇಶನಕ್ಕೆ ಕೋಟಿ ಕೋಟಿ ರೂಪಾಯಿಯನ್ನು ಸಹ ಸಂಬಳ ಸಾರಿಗೆ ಪಡೆದುಕೊಂಡು ರೈತರಿಗೆ ಪರಿಹಾರ ಕೊಡುವಲ್ಲಿ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ಕೈ ತೋರಿಸಿಕೊಂಡು ಕೈಕಟ್ಟಿ ಕುಳಿತಿದ್ದಾರೆ ಆದರೆ ಬರದ ಪಟ್ಟಿಯನ್ನು ರೈತನ ಬೆನ್ನಿಗೆ ಕಟ್ಟಿ ಬರದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ಆಡಳಿತ ಮತ್ತು ವಿರೋಧ ಪಕ್ಷಗಳು ಈಗಲಾದರೂ ರೈತನ ಅನ್ನವನ್ನು ತಿನ್ನುತ್ತಿದ್ದರೆ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ವೈಜ್ಞಾನಿಕ ಬೆಳೆ ನಷ್ಟ ನೀಡಲು ಕ್ರಮ ಕೈಗೊಳ್ಳಲಿ. ಎಂದ ಅವರು ಬರಪೀಡಿತ ಘೋಷಣೆ ದಿನಾಂಕದಿಂದ ರಾಜ್ಯದಲ್ಲಿ ಸಂಪೂರ್ಣ ಬರ ನಿಲ್ಲುವ ತನಕ ಯಾವುದೇ ಮಂತ್ರಿ ಶಾಸಕ ಲೋಕಸಭಾ ಸದಸ್ಯರು ಬರ ನಿರ್ವಹಣೆಗೆ ಹಣವನ್ನು ನೀಡಿ ಇವರಿಗೆ ಇರುವ ವಿಶೇಷ ಸೌಲಭ್ಯದ ಯಾವುದೇ ಸೌಲಭ್ಯಗಳನ್ನು ಪಡೆಯುವುದನ್ನು ಕೈಬಿಡಬೇಕು, ಆಗ ಮಾತ್ರ ಚುನಾಯಿತ ಪ್ರತಿನಿಧಿಗಳು ರೈತ ಪರ ಇದ್ದಾರೆ ಎಂದು ತಿಳಿದುಕೊಳ್ಳಬಹುದು ,ಇದನ್ನು ಇಂದಿನ ಅದಿವೇಶನದಲ್ಲಿ ಪಕ್ಷಾತೀತವಾಗಿ ಎಲ್ಲಾ ಶಾಸಕರು ಘೋಷಣೆ ಮಾಡಲಿ ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕಬಿನಿ ಮತ್ತು ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಬೆಳೆ ಮಾಡಲು ನೀರು ನೀಡಲು ವಿಫಲವಾಗಿರುವ ಕಾರಣ ತಕ್ಷಣ ಪ್ರತಿ ಎಕರೆಗೆ 50,000 ಬೆಳೆ ನಷ್ಟ ಘೋಷಣೆ ಮಾಡಬೇಕು. ತಮಿಳುನಾಡಿಗೆ ನೀರು ಬಿಟ್ಟು ಕಬಿನಿ ವ್ಯಾಪ್ತಿಯ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಆದ್ದರಿಂದ ತಕ್ಷಣ ಕಬಿನಿ ಇಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಹುಲ್ಲಹಳ್ಳಿ ರಾಂಪುರ ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಕೇಂದ್ರಗಳು ಆರಂಭವಾಗಬೇಕು, ಮತ್ತು ತಾಲೂಕಿನ 26 ಕೆರೆಗಳನ್ನು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಪ್ರತಿ ಟನ್ ಗೆ 50 ರೂಪಾಯಿ ನಂತೆ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 8 ಕೋಟಿ ಅಷ್ಟು ರೈತರಿಗೆ ಹಣವನ್ನು ತಕ್ಷಣ ಕೊಡಿಸಬೇಕು. ಸಕ್ಕರೆ ಬೆಲೆ ಜಾಸ್ತಿ ಆಗಿರುವುದರಿಂದ ಪ್ರತಿ ಟನ್ ಕಬ್ಬಿಗೆ 6,000 ನಿಗದಿಗೆ ಒತ್ತಾಯ. ಕಬ್ಬು ಬೆಳೆಗಾರರಿಗೆ ಉತ್ತರ ದಕ್ಷಿಣ ಎಂಬ ತಾರಾತಮ್ಯವಿಲ್ಲದೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ,ವಳಗೆರೆ ಗಣೇಶ್, ಪ್ರಕಾಶ್ ಗಾಂಧಿ, ಕಸುವಿನಹಳ್ಳಿ ಮಂಜೇಶ್, ಸಿದ್ದಯ್ಯನ ಹುಂಡಿ ಸೋಮಣ್ಣ, ಕೀರ್ತಿ, ಮಂಜು, ಪುಟ್ಟಸ್ವಾಮಿ, ಸಿದ್ಧಬಸಪ್ಪ, ಶ್ರೀಕಂಠ, ಜಗದೀಶ್, ಮಹೇಶ್, ನಾಗೇಂದ್ರ, ಭುಜಂಗಪ್ಪ, ಮಾದಪ್ಪ, ಸಿದ್ದಪ್ಪ, ಮಧು, ಕುಮಾರಸ್ವಾಮಿ, ಚಿದಂಬರ, ಮಹೇಶ್, ಮಹದೇವಪ್ಪ ಉಪಸ್ಥಿತರಿದ್ದರು.
ಚಿತ್ರ : ನಂಜನಗೂಡಿನ ಹುಲ್ಲಹಳ್ಳಿ ವೃತ್ತದಲ್ಲಿ ಮಂಗಳವಾರ ರೈತ ಸಂಘದ ಕಾರ್ಯಕರ್ತರು ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. –