
ಪಿರಿಯಾಪಟ್ಟಣ: ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ನೋಂದಣಿಯಾಗಿ, ಗ್ರಾಮೀಣರ ಆರ್ಥಿಕ ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನೆಲಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಜಿ.ಶಿವಶಂಕರ್ ತಿಳಿಸಿದರು.
ಪಟ್ಟಣದ ಡಿ.ದೇವರಾಜು ಅರಸು ಕಲಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೆಲಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಸಹಕಾರ ಸಂಘವು ಅಭಿವೃದ್ಧಿಯಾಗಿ ಅದರ ಪ್ರತಿಫಲ ಸಮಾಜಕ್ಕೆ ಸಿಗಬೇಕಾದರೆ ಸಂಘದ ಸದಸ್ಯರ ಸಹಕಾರ ಅಗತ್ಯ. ಸಹಕಾರಿ ತತ್ವದ ಅಡಿಯಲ್ಲಿ ರೂಪುಗೊಂಡಿರುವ ಸಹಕಾರಿ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪವಾಗದೆ ರಾಜಕೀಯದಿಂದ ದೂರ ಇದ್ದಾಗ ಮಾತ್ರವೇ ಸಂಘವು ತನ್ನ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯ.
ಜವಾಹರ್ ಲಾಲ ನೆಹರೂ ಅವರ ಬದ್ಧತೆಯಿಂದಾಗಿ ರಾಷ್ಟ್ರದ ಅರ್ಥ ವ್ಯವಸ್ಥೆಗೆ ಹೊಸ ರೂಪ ನೀಡಿದ ಸಹಕಾರಿ ಕ್ಷೇತ್ರಕ್ಕೆ ಸುಮಾರು 110 ವರ್ಷಗಳ ಇತಿಹಾಸವಿದೆ. ಶೋಷಣೆ ರಹಿತ ಸಮಾಜ, ಬಡತನ ನಿವಾರಣೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಸಹಕಾರಿ ಚಳವಳಿಯ ಕೊಡುಗೆ ಅಪಾರ. ನಮ್ಮ ನೆಲಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದಲ್ಲಿ ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ಇವರಿಗೆ ಬಳಕೆ ಸಾಲ ಸೇರಿದಂತೆ ಇನ್ನಿತರ ಅಗತ್ಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಸಂಘದಲ್ಲಿ ಸಾಲ ಪಡೆದ ಸಹಕಾರಿ ಬಂಧುಗಳು ಕಾಲಕಾಲಕ್ಕೆ ಮರು ಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನಿರುದ್ಯೋಗಿ ಯುವಕ, ಯವತಿಯರಿಗೆ ವೃತ್ತಿ ಕೌಶಲ ತರಬೇತಿಗಳನ್ನು ನೀಡಿ ಉದ್ಯೋಗ ಸೃಷ್ಟಿಸುವ ಹಾಗೂ ಸಮರ್ಥವಾಗಿ ಉದ್ಯಮಗಳನ್ನು ನಡೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಎನ್.ಹರೀಶ್ ರವರು 2025-26 ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಲೋಕಪಾಲಯ್ಯ, ನಿರ್ದೇಶಕರಾದ ಶಿವಸ್ವಾಮಿ, ಕೆ.ಬಿ.ಶಿವಕುಮಾರಸ್ವಾಮಿ, ಎಂ.ಎಲ್.ನವೀನ, ಕೆ.ಕೃಷ್ಣೇಗೌಡ, ಎಂ.ಕುಮಾರ್, ಧರಣೀಶಪ್ಪ, ಡಿ.ಟಿ.ಸತೀಶ್, ಹೆಚ್.ಎ.ವೆಂಕಟೇಶ್, ಕೆ.ವಿ.ಆನಂದ್, ಎಸ್.ಕೆ.ಜ್ಯೋತಿ, ಇಂದ್ರ, ವೆಂಕಟೇಶ್, ಎ.ಟಿ.ಮಂಜುನಾಯ್ಕ, ಕೃಷಿ ಅಧಿಕಾರಿ ಹಿತೇಶ್, ಮೈಕ್ಯೋಪ್ ಸಂಸ್ಥೆಯ ಸಮನ್ವಯಾಧಿಕಾರಿ ರಾಜಪ್ಪ , ಸಿಬ್ಬಂದಿಗಳಾದ ಅರ್ಚನಾ, ಕೃಷ್ಣಚಾರಿ, ಕಾರ್ತೀಕ್, ಚಂದ್ರಪ್ಪ, ಸಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.