
ನಂಜನಗೂಡು; ಅ. 26ರಂದು ಜರಗುವ ವಾಲ್ಮೀಕಿ ಜಯಂತಿಯನ್ನು ಶ್ರದ್ಧಾ ಮತ್ತು ಭಕ್ತಿ ಪೂರ್ವಕವಾಗಿ ಅದ್ದೂರಿಯಾಗಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ, ಸಮುದಾಯದ ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಭಾಗವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ಹೇಳಿದರು.
ಅವರು ನಗರದ ಗೌರಿಘಟ್ಟದ ಬೀದಿಯಲ್ಲಿರುವ ನಾಯಕ ಸಮುದಾಯ ಭವನದಲ್ಲಿ ತಾಲೂಕು ನಾಯಕ ಸಮುದಾಯದ ವತಿಯಿಂದ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳು ಕಳೆದರೂ ಸಹ ವಾಲ್ಮೀಕಿ ಅವರ ರಾಮಾಯಣ ಸಂದೇಶವು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದೆ, ಆದ್ದರಿಂದ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಿಂದ ಆಚರಣೆ ನಡೆಸಲು ನಾಯಕ ಸಮುದಾಯವು ತೀರ್ಮಾನಿಸಲಾಗಿದೆ, ಆದ್ದರಿಂದ ತಾಲೂಕಿನ ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಭಾಗವಹಿಸುವ ಮೂಲಕ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ಪ್ರಮುಖವಾಗಿ ಕಾನೂನಿನ ಹಿತದೃಷ್ಟಿಯಿಂದ ಯುವಕರು ಡಿಜೆ ತರದೆ, ನಮ್ಮ ಪೂರ್ವಜರ ಜಾನಪದ ಕಲಾತಂಡವನ್ನು ತರುವ ಮೂಲಕ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕು, ಶಾಂತಿಯಿಂದ ಸಮುದಾಯದ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ತಾಲೂಕು ನಾಯಕ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ಈ ಬಾರಿಯ ವಾಲ್ಮೀಕಿಯವರ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದೇ ಅದ್ದೂರಿಯಾಗಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ, ತಾಲೂಕಿನ ಎಲ್ಲಾ ಗ್ರಾಮದ ಸಮುದಾಯದ ಬಾಂಧವರು ಸಹಕಾರ ನೀಡಿ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಂಗಾರಸ್ವಾಮಿ, ಶಿವನಂಜ ನಾಯಕ, ಸುಧೀಂದ್ರ, ಹುಲ್ಲಹಳ್ಳಿ ಶಿವಣ್ಣ, ಕೆ.ಡಿ.ಮಂಜು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.