
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ದಸರಾ ಕವಿಗೋಷ್ಠಿ ಅಕ್ಟೋಬರ್ ೧೩ರಿಂದ ೧೭ರ ವರೆಗೆ ನಡೆಯಲಿದೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷ ಪ್ರೊ.ಎಂ.ನAಜಯ್ಯ ಹೊಂಗನೂರು ತಿಳಿಸಿದರು.
ಬುಧವಾರ ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ
ಕವಿಗೋಷ್ಠಿಯು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಚುಟುಕು-ಹಾಸ್ಯ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಯುವ ಕವಿಗೋಷ್ಠಿ, ಜನಪದ ಕಾವ್ಯಗೋಷ್ಠಿ ಹಾಗೂ ಪ್ರಧಾನ ಕವಿಗೋಷ್ಠಿ ಎಂದು ಐದು ಬಗೆಯ ಗೋಷ್ಠಿಗಳು ಇರಲಿವೆ ಎಂದು ಹೇಳಿದರು.
ಕವಿಗೋಷ್ಠಿಯನ್ನು ಅಕ್ಟೋಬರ್ ೧೩ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಿರಿಯ ಲೇಖಕಿ ವೈದೇಹಿ ಉದ್ಘಾಟಿಸಲಿದ್ದಾರೆ. ಅಂದೇ ಮೊದಲ ಗೋಷ್ಠಿಯಾದ ಹಾಸ್ಯ ಮತ್ತು ಚುಟುಕು ಕವಿಗೋಷ್ಠಿ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಕಿ ಡಾ.ಎಚ್.ಆರ್. ಸುಜಾತ ಭಾಗವಹಿಸುವರು ಎಂದರು.
ಅಕ್ಟೋಬರ್ ೧೪ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಯುವ ಕವಿಗೋಷ್ಠಿ ಜರುಗಲಿದ್ದು, ಕವಯಿತ್ರಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಕವಿ ಎಚ್. ಗೋವಿಂದಯ್ಯ ವಹಿಸಿದರೆ, ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದ ಡಾ. ಸತ್ಯಾನಂದ ಪಾತ್ರೋಟ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡ ಚಲನಚಿತ್ರ ಗೀತ ಸಾಹಿತಿ ಹೃದಯಶಿವ ವಿಶೇಷ ಅತಿಥಿಯಾಗಿ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅ. ೧೫ರಂದು ಬೆಳಿಗ್ಗೆ ೧೦.೩೦ಕ್ಕೆ ಉದಯೋನ್ಮುಖ ಬರಹಗಾರರನ್ನು ಪರಿಚಯಿಸುವ ಚಿಗುರು ಕವಿಗೋಷ್ಠಿಯನ್ನು ಮಕ್ಕಳ ಸಾಹಿತಿ ಕೃಷ್ಣಮೂರ್ತಿ ಬಿಳಿU್ವರೆ ಉದ್ಘಾಟಿಸಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ವಹಿಸಿದರೆ, ಲೇಖಕಿ ಡಾ.ಕವಿತಾ ಕುಸುಗಲ್ ಮುಖ್ಯ ಅತಿಥಿಗಳಾಗಿರುತ್ತಾರೆ. ಚಿಗುರು ಕವಿ ತಾನಿಷ್ ವಿಶೇಷವಾಗಿ ಚಿಗುರು ಅತಿಥಿಯಾಗಿ ಭಾಗಿಯಾಗುತ್ತಾರೆ.
ಜನಪದ ಕಾವ್ಯಗೋಷ್ಠಿ ಅಕ್ಟೋಬರ್ ೧೬ರಂದು ಜರುಗಲಿದ್ದು, ಜಾನಪದ ವಿದ್ವಾಂಸರಾದ ಡಾ. ಪಿ.ಕೆ. ರಾಜಶೇಖರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ವಹಿಸುತ್ತಾರೆ. ಸಾಹಿತಿ ಡಾ.ರಾಜಪ್ಪ ದಳವಾಯಿ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಪ್ರಧಾನ ಕವಿಗೋಷ್ಠಿಯು ಅಕ್ಟೋಬರ್ ೧೭ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಿರಿಯ ಕವಯಿತ್ರಿ ಡಾ.ಪ್ರತಿಭಾ ನಂದಕುಮಾರ್ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಸುಬ್ಬು ಹೊಲೆಯಾರ್ ಗೋಷ್ಠಿಯ ಮುಖ್ಯ ಅತಿಥಿಗಳಾಗುವರು ಎಂದರು.
ಇದೇ ಸಂದರ್ಭದಲ್ಲಿ ಕವಿಗೋಷ್ಠಿಯ ಭಿತ್ತಿಪತ್ರ ಹಾಗೂ ಆಶಯಗೀತೆ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ
ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿಗಳಾದ ಪ್ರೊ.ತ್ರಿವೇಣಿ, ಡಾ.ಉಮೇಶ ಬೇವಿನಹಳ್ಳಿ, ಕಾರ್ಯದರ್ಶಿ ಆನಂದ್ ಹಾಗೂ ಆಶಯಗೀತೆ ಹಾಡಿದ ದಿವ್ಯಾ ಸಚ್ಚಿದಾನಂದ ಹಾಜರಿದ್ದರು.
ಬಹುರೂಪಿ ಕವಿಗೋಷ್ಠಿ
ಮೈಸೂರು: ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಗಾರೆ ಕೆಲಸಗಾರರು, ಪೊಲೀಸ್ ಕಾನ್ ಸ್ಟೇಬಲ್, ಸ್ವಾಮೀಜಿ, ಗೃಹಿಣಿ… ಹೀಗೆ ವಿವಿಧ ವರ್ಗದ, ವಯೋಮಾನದ ನಾಡಿನಾದ್ಯಂತದ ಕವಿಗಳು ಭಾಗವಹಿಸುವರು ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಹೇಳಿದರು.
ಈ ಬಾರಿ ವಿಶೇಷವಾಗಿ ಕವಿಗೋಷ್ಠಿ ಪ್ರಚಾರ ತೇರು ಸುಮಾರು ಹತ್ತು ದಿನ ಮುಂಚಿತವಾಗಿಯೇ ಮೈಸೂರಿನಲ್ಲಿ ಸಂಚರಿಸಿ ಕಾರ್ಯಕ್ರಮದ ಮಹತ್ವವನ್ನು ಸಾರುತ್ತದೆ. ಅಕ್ಟೋಬರ್ ೫ರಂದು ಬೆಳಿಗ್ಗೆ ೧೧ ಗಂಟೆಗೆ ಕುವೆಂಪು ವಿಶ್ವವಿದ್ಯಾಲಯದ ಮುಖ್ಯದ್ವಾರದ ಕುವೆಂಪು ಪ್ರತಿಮೆ ಬಳಿ ಪ್ರಚಾರ ತೇರಿಗೆ ಚಾಲನೆ ಸಿಗಲಿದೆ ಎಂದರು.
ಕವಿಗೋಷ್ಠಿ ನಡೆಯುವ ಕುವೆಂಪು ಅಧ್ಯಯನ ಸಂಸ್ಥೆಯ ಆವರಣದಲ್ಲಿ ಪುಸ್ತಕ, ಕರಕುಶಲ, ಖಾದಿ ಬಟ್ಟೆ ಹೀಗೆ ವಿವಿಧ ಮಳಿಗೆಗಳಿರುತ್ತವೆ. ಅಲ್ಲದೆ ಕವಿಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎರಡು ಕಡೆ ಸೆಲ್ಫಿ ಸ್ಪಾಟ್ ನಿರ್ಮಿಸಲಾಗುವುದು ಎಂದರು.
ವಿದೇಶದಲ್ಲಿ ನೆಲೆಸಿರುವ ಕನ್ನಡ ಕವಿಗಳು ವಿಡಿಯೊ ಮಾಡಿ ಕಳಿಸಿದ್ದನ್ನು ಎಲ್ ಇಡಿ ಪರದೆ ಮೂಲಕ ಕವಿತೆಗಳನ್ನು ಪ್ರಸಾರಗೊಳಿಸಲಾಗುವುದು. ಒಟ್ಟು ೨೦೦ಕ್ಕೂ ಅಧಿಕ ಕವಿಗಳು ಭಾಗವಹಿಸುವರು. ಯುವ ಕವಿಗೋಷ್ಠಿ ನಂತರ ಕುವೆಂಪು ಅವರ ಹಾಡುಗಳನ್ನು ಆಧರಿಸಿದ ನೃತ್ಯ ಪ್ರದರ್ಶನ ಇರಲಿದೆ. ಅಲ್ಲದೆ ಚಿಗುರು ಕವಿಗೋಷ್ಠಿ ನಂತರ ‘ರಾಮಾಯಣ ದರ್ಶನಂ’ ಅಧರಿಸಿದ ಒಂದು ಅಧ್ಯಾಯ ಕುರಿತು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಉರ್ದು ಕವಿಗೋಷ್ಠಿ ಪ್ರತ್ಯೇಕವಾಗಿ ನಡೆಯಲಿದೆ ಎಂದರು