
ನಂಜನಗೂಡು; ಕ್ರೀಡೆ ಕೇವಲ ಸೋಲು ಗೆಲುವಿನ ಆಟವಲ್ಲ, ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆಯನ್ನು ಬೆಳೆಸುವ ಜೀವನದ ಪಾಠದ ಜೊತೆಗೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಹೇಳಿದರು.
ಅವರು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಕೂಟ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಜೊತೆಗೆ, ಎಲ್ಲರೊಡನೆ ಒಂದಾಗಿ ಬೆರೆಯಲು ಸಹಕಾರಿಯಾಗಿದೆ, ಆದ್ದರಿಂದ ವಿದ್ಯಾರ್ಥಿಗಳು ಪಠ್ಯ ವಿಷಯದಷ್ಟೇ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು, ಪ್ರಮುಖವಾಗಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕು ಸೋಲು ಗೆಲುವು ಮುಖ್ಯವಾಗುವುದಿಲ್ಲ ಎಂದ ಅವರು ವಿದ್ಯಾರ್ಥಿಗಳಲ್ಲಿರುವ ನೈಜ ಪ್ರತಿಭೆಯನ್ನು ಪ್ರದರ್ಶನ ಮಾಡಲು ತಾಲೂಕು ಕ್ರೀಡಾಕೂಟ ಮೊದಲ ಮೆಟ್ಟಿಲು ಆಗಿದೆ, ಮೈದಾನದಲ್ಲಿ ನಿಮ್ಮ ಆಟದ ಮೂಲಕ ಕ್ರೀಡಾ ಸ್ಪೂರ್ತಿಯನ್ನು ಮೆರೆಯುವ ಜೊತೆಗೆ ಇಲ್ಲಿಂದ ಜಿಲ್ಲಾ ಮಟ್ಟಕ್ಕೆ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ. ದೀಪು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಂಗನಾಥ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಸವರಾಜು, ಹೆಚ್. ಎಸ್ .ಮಹೇಶ್, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಿಲ್ಲಿಸಿದ್ದು, ಶಿಕ್ಷಕರಾದ ಲಲಿತ, ಧರ್ಮ ರತ್ನಾಕರ, ಸತೀಶ್ ದಳವಾಯಿ, ನಂಜಪ್ಪ, ಪ್ರಕಾಶ್, ರವಿಕುಮಾರ್, ಉಷಾ ಉಪಸ್ಥಿತರಿದ್ದರು.