
ಮೈಸೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ನೈರ್ಮಲ್ಯವಾಗಿರಿಸಿ ಸಾಂಕ್ರಾಮಿಕ ತಡೆಗಟ್ಟುವಲ್ಲಿ ಮುಂಚೂಣಿ ಹೋರಾಟಗಾರರಾದ ಪೌರಕಾರ್ಮಿಕರ ಪಾತ್ರ ಅಮೂಲ್ಯವಾದದ್ದು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಂ.ಸವಿತಾ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಸ್ವಚ್ಛತೆಯೆಂಬ ಮಹತ್ವದ ಕೆಲಸ ನಿರ್ವಹಿಸುವ ಶ್ರಮಿಕ ಜೀವಿಗಳು ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಮಾರ್ಗಸೂಚಿ ಅನ್ವಯ ಪೌರಕಾರ್ಮಿಕರಿಗೆ ದೊರಕುವ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಮಾನವೀಯತೆಯೊಂದಿಗೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ತಾಲ್ಲೂಕಿನಲ್ಲಿ ಸ್ವಚ್ಚತಾ ಸೇವಾ ಅಭಿಯಾನ ಯಶಸ್ವಿಯಾಗಿ ಮಾಡಲಾಗಿದೆ. ಗ್ರಾಮಗಳ ಸ್ವಚ್ಛತೆಗೆ ಶ್ರದ್ಧೆ ಮತ್ತು ಬದ್ಧತೆಯಿಂದ ದುಡಿಯುವ ನಿಮ್ಮೆಲ್ಲರ ಸೇವೆ ಅನನ್ಯವಾದ್ದು. ಸರ್ಕಾರದ ನಿಯಮಾನುಸಾರವಾಗಿ ತಮಗೆ ದೊರಕುವ ಸೌಲಭ್ಯಗಳು ಹಾಗೂ ತಮ್ಮ ಸಮಸ್ಯೆಗೆ ಸ್ಪಂದಿಲಾಗುವುದು. ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಿ.ರಾಜು ಮಾತನಾಡಿ, ಪರಿಸರದಲ್ಲಿನ ಮಾಲಿನ್ಯವನ್ನು ಸ್ವಚ್ಛಗೊಳಿಸುವ ನಾವು ನಿಜವಾದ ಪರಿಸರದ ಮಕ್ಕಳು. ಈ ಹುದ್ದೆಯ ಜೊತೆಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಸರ್ಕಾರದ ಸೌಲಭ್ಯ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಮ್ಮ ಮುಂದಿಗೆ ಪೀಳಿಗೆಯು ಬೇರೆ ಹುದ್ದೆ ಹಾಗೂ ಉದ್ಯಮ ನಡೆಸುವಂತೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಚ್ಛತಾಗಾರರಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿ, ಅಗತ್ಯವಿರುವ ಔಷಧವನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು. ಈ ವೇಳೆ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಕೆ.ರುಕ್ಮಾಂಗದ , ಸಹಾಯಮ ಲೆಕ್ಕಾಧಿಕಾರಿ ಭೈರಪ್ಪ, ಪಿಡಿಒ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ.ಸಿ.ಶಿವಣ್ಣ, ಪೌರಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್, ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯೆ ವಸಂತ ಕುಮಾರಿ , ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.