
ಎಚ್ . ಡಿ.ಕೋಟೆ : ಅರಣ್ಯ ಇಲಾಖೆ ಮತ್ತು ಬುಡಕಟ್ಟು ಜನಾಂಗದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು ಹಾಗೂ ಒಟ್ಟಾಗಿ ಸೇರಿಕೊಂಡು ಪರಿಸರ ಸಂರಕ್ಷಣೆ ಮಾಡುವುದೇ ವನ್ಯಜೀವಿ ಸಪ್ತಾಹದ ಉದ್ದೇಶವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಸೀಮಾ ಪಿ.ಎ, ಹೇಳಿದರು.
ತಾಲೂಕಿನ ಬಳ್ಳೆಯಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಬುಡಕಟ್ಟು ಜಗತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಬುಡಕಟ್ಟು ಹಾಗೂ ಅರಣ್ಯ ಇಲಾಖೆ ನಡುವೆ ದೊಡ್ಡ ಅಂತರವಿತ್ತು. ಕಳೆದ ಕೆಲ ವರ್ಷಗಳಿಂದ ವನ್ಯಜೀವಿ ಸಪ್ತಾಹ ಮೂಲಕ ಆ ಅಂತರವನ್ನು ಕಡಿಮೆ ಮಾಡಿ, ಒಗ್ಗಟಾಗಿ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಎಂದರು. ಬುಡಕಟ್ಟು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಟೈಗರ್ ಫೌಂಡೇಶನ್ ನೆರವು ನೀಡಲಿದ್ದು, ಇದನ್ನು ಆದಿವಾಸಿಗಳು ಬಳಸಿಕೊಳ್ಳಬೇಕು. ಎಸ್ ಎಸ್ ಎಲ್ ಸಿ ಮುಗಿದ ನಂತರ ಮೀಸಲಾತಿಯಡಿ ಅನೇಕ ಅನುಕೂಲಗಳಿವೆ. ಕಾಡಿನಲ್ಲಿ ನೆಟ್ ವರ್ಕ್ ಸಿಗದಿದ್ದಾಗ ಮರವೇರಿ ಮೊಬೈಲ್ ನಲ್ಲಿ ರೀಲ್ಸ್ ನೋಡುವ ಬದಲು ಉನ್ನತ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಸೀಮಾ ಪಿ.ಎ ಸಲಹೆ ನೀಡಿದರು.
ಬಳ್ಳೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಮಾತನಾಡಿ, ಅರಣ್ಯ ಸಂರಕ್ಷಣೆಗೆ ಆದಿವಾಸಿಗಳು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕಾಡುಪ್ರಾಣಿ ಮತ್ತು ಮಾನವ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬುಡಕಟ್ಟು ಜಗತ್ತು ಕಾರ್ಯಕ್ರಮ ಸಹಕಾರಿಯಾಗಲಿದೆ. ಅರಣ್ಯದಲ್ಲಿ ಕಾಡ್ಗಿಚ್ಚಿನಂತಹ ಅನಾಹುತಗಳನ್ನು ತಪ್ಪಿಸಲು ಬುಡಕಟ್ಟು ಜನರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಹೊಳೆ ಉಪವಿಭಾಗ ಎಸಿಎಫ್ ಗೋಪಾಲ್, ಹುಣಸೂರು ಉಪವಿಭಾಗ ಎಸಿಎಫ್ ಲಕ್ಷ್ಮಿಕಾಂತ್, ಎಸಿಎಫ್ ಮಧು, ಆರ್ಎಫ್ ಓಗಳಾದ ಸಿದ್ದರಾಜು, ಹನುಮಂತರಾಜು, ಅಭಿಷೇಕ್, ಮಂಜುನಾಥ್, ವಿನೋದ್ಗೌಡ, ಡಿಆರ್ಎಫ್ ಒ ಚಂದನ್ ಹಾಗೂ ಪದ್ಮಶ್ರೀ ಪುರಸ್ಕೃತರಾದ ಮೊತ್ತ ಸೋಮಣ್ಣ, ಜಾನಪದ ಕಲಾವಿದ ಡಾ. ಅಮ್ಮಚಂದ್ರುಸುರೇಶ್, ಮಾಜಿ ವನ್ಯಜೀವಿ ಪರಿಪಾಲಕಿ ಕೃತಿಕ ಆಲನಹಳ್ಳಿ, ಪ್ರೊಫೆಸರ್ ಜಡೇಗೌಡ, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಬೋಸ್ ಮಾದಪ್ಪ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಶೈಲೇಂದ್ರ, ಮುಖಂಡರುಗಳಾದ ಸುಬ್ಬು, ಸಿದ್ದಪ್ಪ ಪಿ.ಕೆ, ಪುಷ್ಪ, ಗಂಗಮ್ಮ, ರಾಮು, ಪಾರ್ವತಿ, ಮಹದೇವು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.