
ಹನೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ೧೦ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು ಮುಂಭಾಗ ಭಾನುವಾರ ನಡೆದಿದೆ.
ಬೆಂಗಳೂರಿನಿ0ದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿದ್ದ ಕಾರು ಹಾಗೂ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದು, ಪ್ರಯಾಣಿಕರಾದ ಸುವರ್ಣ (೩೭), ಲೋಕೇಶ್ (೨೦), ಶ್ರೇಯ (೧೬), ರುಕ್ಮಿಣಿ (೪೨), ಮಂಜೇಶ್ (೪೩), ಭಾಗ್ಯಮ್ಮ (೫೫), ಮಹಾದೇವ (೫೦), ಮನ್ಸೂರ್ (೩೮), ಮೊಹಮ್ಮದ್ ತೌಫಿಕ್ (೨೮) ಹಾಗೂ ನಿಜಾಮ್ (೨೯) ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿದು ಅಗ್ನಿಶಾಮಕ ಠಾಣಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಮಹೇಶ್, ಜಯಪ್ರಕಾಶ್, ಅಶೋಕ್, ನಾಗಪ್ಪ, ಅನಿಲ್, ಲಿಂಗೇಶ್, ಹರ್ಷ, ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಪ್ರಕಾಶ್, ಗಣೇಶ್ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡು ರಸ್ತೆಯಲ್ಲಿ ನರಳುತ್ತಿದ್ದವರನ್ನು ೧೦೮ ಆಂಬ್ಯುಲೆನ್ಸ್ ಸಿಗದ ಕಾರಣ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗಳನ್ನು ತಡೆದು ಕಾಮಗೆರೆ ಗ್ರಾಮದ ಹೋಲಿ ಕ್ರಾಸ್ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಹನೂರು ಪೊಲೀಸ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಎರಡು ಕಾರುಗಳನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.