
ಮೈಸೂರು: ರಂಗಭೂಮಿ ಕೇವಲ ಅಭಿನಯ ಕಲಿಸುವ ವೇದಿಕೆಯಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ವಿಸ್ತರಿಸುವ ಪಾಠಶಾಲೆ ಎಂದು ನಿರಂತರ ಫೌಂಡೇಶನ್ನ ನಿರ್ದೇಶಕ ಶ್ರೀನಿವಾಸ ಪಾಲಹಳ್ಳಿ ಹೇಳಿದರು.
ನಗರದ ಕಲಾಮಂದಿರದಲ್ಲಿರುವ ಕಿರು ರಂಗಮAದಿರದಲ್ಲಿ ನಿರಂತರ ಫೌಂಡೇಶನ್ ಆಯೋಜಿಸಿದ್ದ ೨೦ನೇ ವರ್ಷದ ಸಹಜರಂಗೋತ್ಸವದಲ್ಲಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಮಾಡಿಸುವುದರ ಜೊತೆಗೆ ಅವರ ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಅರಿವು ಮತ್ತು ಮಾನವೀಯ ಗುಣಗಳನ್ನು ಬೆಳೆಸುವುದು ಸಹಜರಂಗದ ಮುಖ್ಯ ಉದ್ದೇಶವಾಗಿದೆ ಎಂದರು.
ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತೊಬ್ಬರ ಬದುಕು, ಭಾವನೆ ಮತ್ತು ಅನುಭವಗಳನ್ನು ಅರ್ಥಮಾಡಿಕೊಳ್ಳುವ ಅವಕಾಶ ಪಡೆಯುತ್ತಾರೆ. ಇದರಿಂದ ಸಹಾನುಭೂತಿ, ತಂಡದ ಮನೋಭಾವ, ಜವಾಬ್ದಾರಿ ಹಾಗೂ ಪರಸ್ಪರ ಗೌರವದಂತಹ ಗುಣಗಳು ಬೆಳೆಯುತ್ತವೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪರಸ್ಪರ ಮಾತನಾಡುವುದು, ಆಲಿಸುವುದು, ಕಾಯುವುದು ಹಾಗೂ ಒಟ್ಟಾಗಿ ಕೆಲಸ ಮಾಡುವುದನ್ನು ರಂಗಭೂಮಿ ಕಲಿಸುತ್ತದೆ ಎಂದು ಹೇಳಿದರು.
ಟೆರಿಸಿಯನ್ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಚೇತನ್ ಎಂ. ಮಾತನಾಡಿ, ನಟರಂಗ ಥಿಯೇಟರ್ ಕ್ಲಬ್ ಹಾಗೂ ನಿರಂತರ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ರಂಗಭೂಮಿಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ ಎಂದರು. ೨೫ ದಿನಗಳ ತರಬೇತಿ ಶಿಬಿರವು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಮಾತುಗಾರಿಕೆ ಮತ್ತು ಬದುಕಿನ ಕುರಿತ ದೃಷ್ಟಿಕೋನದಲ್ಲಿ ಬದಲಾವಣೆ ತಂದಿದೆ ಎಂದು ತಿಳಿಸಿದರು.
ಐಕ್ಯೂಎಸಿ ಸಂಚಾಲಕ ವಿವೇಕ್ ಚಾರ್ಲ್್ಸ ಮಾತನಾಡಿ, ಕಾಲೇಜಿನಲ್ಲಿ ಮೊದಲ ಬಾರಿಗೆ ನಡೆದ ಒಂದು ತಿಂಗಳ ರಂಗ ತರಬೇತಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ದ್ವೇಷದ ಬದಲು ಪ್ರೀತಿ, ಮಾನವೀಯತೆ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸುವಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಟೆರಿಸಿಯನ್ ಕಾಲೇಜಿನ ಪ್ರಾಂಶುಪಾಲರಾದ ರೇವ್. ಡಾ. ರೋಹಿಣಿ, ನಿರಂತರದ ಸುಗುಣ , ಹರಿಪ್ರಸಾದ್ ಬೇಸಾಯಿ, ಬದುಕು ಸಂಸ್ಥೆಯ ಧನಂಜಯ, ಡಾ.ರೇಖಾ ,ಡಾ. ದೇವಕಿಧರ್ಮಿಸ್ಠೆ, ದೀಪಕ್ ಸಂಚಲನ, ಕೆಂಪರಾಜು ಮತ್ತು ನೂರಾರು ಜನ ಪ್ರೇಕ್ಷರು ಮತ್ತು ಪೊಷಕರು ಭಾಗವಹಿಸಿದ್ದರು, ಕಾರ್ಯಕ್ರಮದ ನಂತರ ವಿಲಿಯಂ ಶೇಕ್ಸ್ಪಿಯರ್ರ `ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್’ ನಾಟಕದ ಪ್ರದರ್ಶನ ನಡೆಯಿತು.

