
ಮೈಸೂರು: ಶ್ರಮ ವಹಿಸಿ ಸಿದ್ಧತೆ ನಡೆಸಿದರೆ ಯಶಸ್ಸು ಸಧ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳು ಯೋಜನೆ, ಸಿದ್ಧತೆ ಹಾಗೂ ಶ್ರಮ ಎಂಬ ಮೂರು ಮುಖ್ಯ ಸೂತ್ರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಉಪ ಮಹಾನಿರೀಕ್ಷಕ ವಿ.ರಾಜೇಂದ್ರ ಪ್ರಸಾದ್ ಹೇಳಿದರು.
ಗುರುವಾರ ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಜಂಟಿ ಸಹಯೋಗದೊಂದಿಗೆ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯ ಮೊದಲನೇ ಅಣಕು ಪರೀಕ್ಷೆಯ ೨ನೇ ಪತ್ರಿಕೆಯ ಪರೀಕ್ಷೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು,
ಶಾಂತಿಕಾಲದಲ್ಲಿ ಹೆಚ್ಚು ಬೆವರು ಸುರಿಸಿದರೆ, ಯುದ್ಧಕಾಲದಲ್ಲಿ ಕಡಿಮೆ ರಕ್ತ ಸೋರುವುದು ಎಂಬ ಇಂಗ್ಲಿಷ್ ನಾಣ್ಣುಡಿಯನ್ನು ಉಲ್ಲೇಖಿಸಿದÀರು. ಪರೀಕ್ಷೆಯ ಮುನ್ನಾ ಅವಧಿಯನ್ನು ಅಭ್ಯರ್ಥಿಗಳು ಸೂಕ್ತವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಪರೀಕ್ಷೆಗೆ ತಯಾರಿ ನಡೆಸುವ ಹಂತದಲ್ಲೇ ಅಭ್ಯರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕು. ಇದು ಮುಂದಿನ ದಿನಗಳಲ್ಲಿ ಉದ್ಯೋಗ ದೊರೆತಾಗ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು, ತಮ್ಮ ಸೇವಾ ಅವಧಿಯಲ್ಲಿ ಎದುರಿಸಿದ ಅನೇಕ ಸಂದಿಗ್ಧ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿದರು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಒಬ್ಬ ವ್ಯಕ್ತಿ ಸ್ವತಃ ಪ್ರಾಮಾಣಿಕವಾಗಿರುವುದರ ಜೊತೆಗೆ ತಾನು ಪ್ರಾಮಾಣಿಕ ಎಂಬುದನ್ನು ಸಾರ್ವಜನಿಕರಿಗೂ ಮನದಟ್ಟು ಮಾಡುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉದ್ಯೋಗಾಕಾಂಕ್ಷಿಗಳು ಯಾವುದೇ ಪರೀಕ್ಷೆಯನ್ನೂ ನಿರ್ಲಕ್ಷಿಸದೆ ಎದುರಿಸಿ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು. ನಾವು ಚಂದ್ರನನ್ನು ತಲುಪುವ ಗುರಿ ಇಟ್ಟುಕೊಂಡರೆ, ಕನಿಷ್ಠ ಮರದ ಮೇಲ್ಭಾಗವನ್ನಾದರೂ ತಲುಪಬಹುದು. ಆದ್ದರಿಂದ ದೊಡ್ಡ ಆಸೆ ಮತ್ತು ಗುರಿಗಳನ್ನು ಇಟ್ಟುಕೊಳ್ಳುವವರು ಸಣ್ಣಪುಟ್ಟ ಪರೀಕ್ಷೆಗಳೆಂದು ನಿರ್ಲಕ್ಷಿಸದೆ ಅವುಗಳನ್ನು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ ಬಿ., ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರಮೇಶ್ ನರಸಯ್ಯ, ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ಸೌಮ್ಯ ಎಸ್. ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.