
ಮೈಸೂರು; ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ನಡೆಸುತ್ತಿರುವ ಕಾಂಗ್ರೆಸ್ ಕೂಟದ ಪ್ರತಿಭಟನೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ವರುಣ ಕ್ಷೇತ್ರದ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಕೂಟದ ಈ ಹೋರಾಟ ಖಂಡನೀಯ. ಇದು ದೇಶದ್ರೋಹದ ಪ್ರತಿಭಟನೆಯಾಗಿದೆ ಎಂದು ಹೇಳಿದ್ದಾರೆ.
ದೆಹಲಿಯ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಎಳೆದು ಹಿಂದಕ್ಕೆ ತಳ್ಳಿ, ಕೇವಲ ಮಾಧ್ಯಮಕ್ಕೆ ಪೋಸ್ ನೀಡುವ ಪ್ರಚಾರದ ಚಟಕ್ಕಾಗಿ ಮುಂದೆ ಸಾಗಿರುವುದು ಅತ್ಯಂತ ಖಂಡನೀಯ ತಮ್ಮ ಕಠಿಣ ಪರಿಶ್ರಮದಿಂದ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದು, ಮುಖ್ಯಮಂತ್ರಿ ಸ್ಥಾನ ತಪ್ಪಿದರೂ ಸತತ ಮೂರು ವರ್ಷಗಳ ಕಾಲ ಕಠಿಣ ತಪಸ್ವಿಯಂತೆ ಕಾದು ಮುಖ್ಯಮಂತ್ರಿಯಾಗಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನು ಈ ರೀತಿ ತುಚ್ಚವಾಗಿ ನಡೆಸಿಕೊಂಡಿರುವ ರಾಹುಲ್ ಗಾಂಧಿ ಕೂಡಲೇ 7 ಕೋಟಿ ಕನ್ನಡಿಗರ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ವೋಟು ತರುವ ತಾಕತ್ತಿಲ್ಲದ ರಾಹುಲ್ ಗಾಂಧಿಯವರು, ವೋಟು ತರುವ ತಾಕತ್ತಿರುವ ಡಿಕೆ ಶಿವಕುಮಾರ್ ರನ್ನು ಈ ರೀತಿ ನಡೆಸಿಕೊಂಡಿರುವುದು ಎಲ್ಲಾ ರಾಜಕೀಯ ಪಕ್ಷದ ಕಾರ್ಯಕರ್ತರಿಗೂ ಮಾಡಿದ ಅಪಮಾನವಾಗಿದೆ ಹಾಗೂ ಅಪರಾಧವಾಗಿದೆ . ಇವರಿಗೆ ಸಂವಿಧಾನಾತ್ಮಕವಾದ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ