
• ಒಂದು ಗಂಟೆಗೂ ಹೆಚ್ಚುಕಾಲ ರಸ್ತೆತಡೆ, ಸಂಚಾರ ಅಸ್ತವ್ಯಸ್ತ, ಪೊಲೀಸರ ವಿರುದ್ಧವೂ ರೈತರ ಆಕ್ರೋಶ
ಮೈಸೂರು : ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗಿರುವ ರೈತ ದಸರಾದಲ್ಲಿ , ಪ್ರದರ್ಶನಕ್ಕೆ ಬಂದಿರುವ ಹಳ್ಳಿಕಾರ್ ಎತ್ತುಗಳಿಗೆ ಕುಡಿಯಲು ಉತ್ತಮವಾದ ನೀರು ಮತ್ತು ಮೇವು ಒದಗಿಸಿಲ್ಲ, 12 ಗಂಟೆಯಾದರೂ ರೈತರಿಗೆ ಉಪಹಾರ ನೀಡಿಲ್ಲ, ರೈತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ನೂರಾರು ಮಂದಿ ರೈತರು ಶನಿವಾರ ನಗರದ ಕುಕ್ಕರಹಳ್ಳಿ ಕೆರೆ ಪಕ್ಕದ ಕಾಂತರಾಜ ಅರಸು ರಸ್ತೆ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರಲ್ಲದೇ, ದಸರಾ ಉಪ ಸಮಿತಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 60 ಜೊತೆ ಹಳ್ಳಿಕಾರ್ ಎತ್ತುಗಳೊಂದಿಗೆ ಆಗಮಿಸಿದ ನೂರಾರು ರೈತರು ದಸರಾ ಉಪ ಸಮಿತಿಯ ನಿರ್ಲಕ್ಷ÷್ಯ ಮತ್ತು ಅವ್ಯವಸ್ಥೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ರೈತ ದಸರಾದಲ್ಲಿ ಹಳ್ಳಿಕಾರ್ ಎತ್ತುಗಳ ಪ್ರದರ್ಶನಕ್ಕೆ ಕರೆಸಲಾಗಿತ್ತು, ಆದರೇ, ರೈತರು ಮಕ್ಕಳಂತೆ ಜೋಪಾನ ಮಾಡಿ ಸಾಕುವ ಎತ್ತುಗಳಿಗೆ ಕನಿಷ್ಠ ಉತ್ತಮವಾದ ಕುಡಿಯುವ ನೀರು ಒದಗಿಸಿಲ್ಲ, ಕಲುಷಿತ ನೀರು ಕೊಡಲಾಗುತ್ತಿದೆ. ಉತ್ತಮವಾದ ಮೇವು ನೀಡಿಲ್ಲ, ಶುಕ್ರವಾರ ರಾತ್ರಿ ನಾವು ರಾಸುಗಳಿಂದ ಬಂದಿರುವ ರೈತರಿಗೆ ಇಲ್ಲಿಯ ತನಕ ಉಪಹಾರವನ್ನೂ ಒದಗಿಸಿಲ್ಲ, ಈ ಸರ್ಕಾರ ಮತ್ತು ಜಿಲ್ಲಾಡಳಿತ, ದಸರಾ ಸಮಿತಿ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಕೇವಲ ಮನರಂಜನೆ ನೀಡುವ ಕಂಬಳಕ್ಕೆ ಆದ್ಯತೆ ನೀಡುತ್ತಿದೆ ಆದರೇ, ಲೋಕಕ್ಕೆ ಅನ್ನ ನೀಡುವ ನಿಜವಾದ ರೈತರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ, ರೈತರು ಹಳ್ಳಿಕಾರ್ ಎತ್ತುಗಳನ್ನು ಮಕ್ಕಳಂತೆ ಸಾಕುತ್ತಾರೆ. ಆದರೇ ಅವುಗಳಿಗೆ ಉತ್ತಮವಾದ ನೀರನ್ನೂ ಸಹ ಈ ಸಮಿತಿಯವರು ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರೊಂದಿಗೆ ರೈತ ಮುಖಂಡರ ವಾಗ್ವಾದ;
ಜಿಲ್ಲಾಡಳಿತದ ವಿರುದ್ಧ ರೈತರು ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ರಸ್ತೆ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಡಿಸಿಪಿ ಸುಂದರರಾಜು ಆಗಮಿಸಿ, ರೈತರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಒಬ್ಬ ಶಾಸಕ ಬಂದರೆ ನೀವು ಮತ್ತು ಅಧಿಕಾರಿಗಳು ಕೈಕಟ್ಟಿ ನಿಲ್ಲುತ್ತೀರಿ, ರೈತರನ್ನು ದಸರಾಕ್ಕೆ ಕರೆಸಿ ಅವರಿಗೆ ಅವಮಾನ ಮಾಡಿರುವ ಜಿಲ್ಲಾಡಳಿತ ಸ್ಥಳಕ್ಕೆ ಬರುವ ತನಕ ನಾವು ಎದ್ದೇಳಲ್ಲ ಎಂದು ರೈತರು ಬಿಗಿಪಟ್ಟು ಹಿಡಿದು ಘೋಷಣೆ ಕೂಗಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಚಿನಕುರಳಿ ಸಿ.ಎಸ್.ಸೋಮೇಗೌಡ, ಬೇವಿನಕುಪ್ಪೆ ಅನೀಲ್ ಇತರರು ಇದ್ದರು.