
ಎಚ್ ಡಿ ಕೋಟೆ : ವೀರಶೈವ ಲಿಂಗಾಯತ ಸಮಾಜ ಪ್ರತಿಯೊಂದು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೆಳವಣಿಗೆಯಲ್ಲಿ ತಾನು ಬೆಳವಣಿಗೆ ಕಾಣುತ್ತಿರುವ ಸಮಾಜ. ಪ್ರತಿಯೊಂದು ರೀತಿಯಲ್ಲೂ ಸಮಾಜಕ್ಕೆ ಕೊಡುಗೆ ನೀಡುತ್ತಾ ಬರುತ್ತಿರುವ ಸಮುದಾಯ ಇವತ್ತು, ಸಂಘಟನೆ ವಿಚಾರ ಬಂದಾಗ ಪ್ರಶ್ನೆ ತಲೆದೂರಿದೆ. ಈ ನಿಟ್ಟಿನಲ್ಲಿ ರಾಜಕೀಯವಾಗಿ ಸಂಘಟನಾತ್ಮಕವಾಗಲು ಸಮುದಾಯದ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಹೇಳಿದರು.
ಪಟ್ಟಣದ ಜೆಎಸ್ ಎಸ್ ಮಂಗಳ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಯುವಘಟಕ, ಬಸವ ಬಳಗ ಮತ್ತು ಮಹಿಳಾ ಘಟಕ ಪದಗ್ರಹಣ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಾದ್ಯಂತ ಲಿಂಗಾಯತ ಸಮುದಾಯದ ಜನಸಂಖ್ಯೆ ಅಂದಾಜು ಐದೂವರೆ ಕೋಟಿಯಿಂದ 6 ಕೋಟಿ ಇದೆ. ಆದರೆ ಪ್ರಸ್ತುತ ವೀರಶೈವ ಮಹಾಸಭಾದ ಸದಸ್ಯರ ಸಂಖ್ಯೆ 3 ಲಕ್ಷ ಆಸುಪಾಸಿನಲ್ಲಿದೆ. ಇದನ್ನು ಮನಗಂಡು ಇದೀಗ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಲು ಅಭಿಯಾನ ಆರಂಭಿಸಲಾಗಿದ್ದು, ಪ್ರತಿಯೊಬ್ಬರು ಮೊಬೈಲ್ ನಲ್ಲೇ ಸದಸ್ಯತ್ವ ನೋಂದಣಿ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಡವಲು ವಿರಕ್ತ ಮಠದ ಶ್ರೀ ಮಹದೇವಸ್ವಾಮಿಗಳು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜ ಒಗ್ಗೂಡಿ ಮುನ್ನೆಡೆದಾಗ ಮಾತ್ರ ಫಲ ಸಿಗುತ್ತದೆ. ಬೇರೆ ಸಮಾಜಗಳ ಆಗುಹೋಗುಗಳ ಬಗ್ಗೆ ಮಾತನಾಡುವ ಬದಲು ನಮ್ಮ ಸಮಾಜ ಒಗ್ಗೂಡಿ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ, ಒತ್ತಡಕ್ಕೆ ಮಣಿಯದೆ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಂಘಟನಾತ್ಮಕವಾಗಿ ಚಿಂತಿಸಲು ಸಾಧ್ಯವಾಗುತ್ತೆ. ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತುಕೊಂಡು ಸ್ಮಾರ್ಟ್ ಫೋನ್ ಮೂಲಕ ಸದಸ್ಯತ್ವ ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು, ಇದನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ಮನು ಮಾತನಾಡಿ, ಸಮಾಜದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಹಾಗೂ ಸಂಘಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದೇ ಸದಸ್ಯತ್ವ ನೋಂದಣಿ ಉದ್ದೇಶವಾಗಿದೆ. ಡಿಜಿಟಲ್ ಜೊತೆಗೆ ಮನೆ ಮನೆಗೂ ತೆರಳಿ ಸದಸ್ಯತ್ವ ನೋಂದಣಿ ಮಾಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಜ್ಯ ಯುವ ಘಟಕದ ಕಾರ್ಯದರ್ಶಿ ಭಾನುಪ್ರಕಾಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರ್ಜುನ ಪಾರ್ಥ, ಬಂಕ್ ರುದ್ರಪ್ಪ, ಮೊತ್ತ ಬಸವರಾಜಪ್ಪ, ಹೆಚ್ ಸಿ ಶಿವಣ್ಣ, ಯೋಗೀಶ್, ನಟರಾಜ್, ನಂದೀಶ್, ಶಿವಸ್ವಾಮಿ, ನಾಗರಾಜಪ್ಪ, ಬ್ಯಾಂಕ್ ವೀರಪ್ಪ, ಜೆ.ಪಿ ಶಿವರಾಜಪ್ಪ, ಬಿ ಗುರುಸ್ವಾಮಿ, ರಾಜೇಶ್, ಸ್ವಾಮಿ, ಸುರೇಶ್, ಕೆಂಡಗಣಸ್ವಾಮಿ, ಮಹದೇವಸ್ವಾಮಿ, ಸತೀಶ, ಸೋಮಶೇಖರ್ ಹೆಚ್ ಬಿ, ಪ್ರೇಮಕುಮಾರ, ಶಿವಕುಮಾರ, ವೃಷಬೇಂದ್ರ, ರಮೇಶ, ಮಹೇಶ್ ರೆಡ್ಡಿ, ನಂದೀಶ್, ಕುಮಾರ, ಗಿರೀಶ್, ವಿಶ್ವ, ನವೀನ್, ಚೆನ್ನಪ್ಪ, ಪರಮೇಶ, ಮಹಿಳಾ ಅಧ್ಯಕ್ಷರಾದ ದೇವಮಣಿ, ಸುಧಾಮಣಿ, ಯುವ ಘಟಕ ಅಧ್ಯಕ್ಷ ಮನು, ಬಸವ ಬಳಗ ಅಧ್ಯಕ್ಷ ಗಿರೀಶ್ ಬಿ. ಸೇರಿದಂತೆ ಎಲ್ಲಾ ಗ್ರಾಮದ ಯಜಮಾನರು, ಮುಖಂಡರು ಉಪಸ್ಥಿತರಿದ್ದರು.