
ಪಿರಿಯಾಪಟ್ಟಣ: ರೈತರು ಹಲವು ದಶಕಗಳಿಂದ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ರೂಢಿಗತ ರಸ್ತೆಗೆ ತಂತಿ ಬೇಲಿ ಹಾಗೂ ಸಿ.ಸಿ. ಕ್ಯಾಮೆರಾ ಅಳ ವಡಿಸಿ ಕೃಷಿ ಮಾಡಲು ತೊಂದರೆ ಕೊಡುತ್ತಿದ್ದಾರೆ ಎಂದು ಜಮೀನು ಮಾಲಿಕ ರಾಜು ಪಿ ಎಂ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐಚನಹಳ್ಳಿ ಗ್ರಾಮದ ಸರ್ವೆ ನಂಬರ್ 51ರ ಜಮೀನುಗಳಲ್ಲಿ 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ
ಗ್ರಾಮದ ನಿವಾಸಿಗಳು ಇತ್ತೀಚಿನ ದಿನಗಳಲ್ಲಿ ಸರ್ವೆ ನಂಬರ್ 49ರಲ್ಲಿರುವ ಸರ್ಕಾರಿ ಕೆರೆಯನ್ನು ಹಾಗೂ ಸರ್ವೆ ನಂಬರ್ 47 ಮತ್ತು 45ರಲ್ಲಿರುವ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅನಾದಿ ಕಾಲದಿಂದಲೂ ರೈತರು ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ನಡೆಸಲು ಬಳಸುತ್ತಿದ್ದ ರೂಢಿಗತ ರಸ್ತೆಗೆ ತಂತಿಬೇಲಿ ಹಾಕಿ. ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿರುವುದು ರೈತರ ಸಂಚಾರಕ್ಕೆ ಅಡ್ಡಿಯಾಗಿದೆ ಮುಂದುವರೆದು ರೈತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಬೆದರಿಕೆ ಹಾಕಲಾಗುತ್ತಿದ್ದಾರೆ ಈ ಬೆಳವಣಿಗೆಗಳಿಂದ ನೊಂದಿರುವ ರೈತರಿಗೆ ಜಮೀನುಗಳಲ್ಲಿ ಕೃಷಿ ಕಾರ್ಯ ನಡೆಸಲು ಸಾಧ್ಯವಾಗದೆ, ಕೆಲವು ಜಮೀನುಗಳನ್ನು ಪಾಳು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವುದರಿಂದ ಸಂಬಂದಪಟ್ಟ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಹೇಳಿದರು
ರೈತ ಮುಖಂಡ ದೊಡ್ಡಯ್ಯ ಮಾತನಾಡಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮ ನಕಾಶೆ ಮತ್ತು ಕಂದಾಯ ದಾಖಲೆಗಳ ಆಧಾರದಲ್ಲಿ ಸರ್ಕಾರಿ ರಸ್ತೆ, ಕೆರೆ ಹಾಗೂ ರೈತರ ಜಮೀನುಗಳ ಗಡಿಗಳನ್ನು ಪರಿಶೀಲಿಸಬೇಕು. ಒತ್ತುವರಿ ನಡೆದಿರುವುದು ದೃಢಪಟ್ಟಲ್ಲಿ ತೆರವುಗೊಳಿಸಿ, ರೈತರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ವಿಧವೆ ರುಕ್ಕಮ್ಮ ಅವರ ಜಮೀನಿನ ರಕ್ಷಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ, ತಪ್ಪಿ ತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ಸಂದರ್ಭ ಪಕ್ಕದ ಜಮೀನಿನ ಮಾಲೀಕರಾದ ರುಕ್ಮಿಣಿ, ವಿಜಯ್ ಕುಮಾರ್, ಮೋಹನ್, ರಾಜೇಶ್ ರೈತ ಮುಖಂಡರಾದ ಚೆಲುವರಾಯ, ಶ್ರೀನಿವಾಸ್ ನಾಯಕ ಇದ್ದರು