
ಮೈಸೂರು; ಇದೇ ಭಾನುವಾರ ನಡೆಯಲಿರುವ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳ ಉಪಯೋಗಕ್ಕಾಗಿ ಮಂಗಳವಾರ ಮೈಸೂರಿನ ನಗರ ಕೇಂದ್ರ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಉಚಿತ ಅಣುಕು ಪರೀಕ್ಷೆಯನ್ನು ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ನಡೆಸಲಾಯಿತು.
ಸದರಿ ಪರೀಕ್ಷೆಗೆ ೬೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಉಚಿತ ಅಣುಕು ಪರೀಕ್ಷೆಯನ್ನು ಉದ್ಘಾಟಿಸಿದ ನಿವೃತ್ತ ತಹಶೀಲ್ದಾರ್ ಕೆ.ಎಸ್. ಬಾಲಸುಬ್ರಹ್ಮಣ್ಯ ಮಾತನಾಡಿ, ಯುವಜನತೆ ಮೊಬೈಲ್ನಿಂದ ದೂರ ಇರುವುದು ಒಳ್ಳೆಯದು. “ಪುಸ್ತಕ ಓದುವ ಅಭ್ಯಾಸ ಬೆಳಸಿಕೊಂಡಲ್ಲಿ ಜೀವನದಲ್ಲಿ ಯಾವುದೇ ಆತಂಕವನ್ನು ಎದುರಿಸುವ ಹಾಗೂ ಜಯಶೀಲರಾಗಲು ಸಾಧ್ಯ ಎಂದರು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಹೆಚ್ಚು ಸಾಮಾನ್ಯ ಜ್ಞಾನ, ಭಾಷೆ ಮೇಲಿನ ಹಿಡಿತ ಹಾಗೂ ಗಣಕ ಯಂತ್ರದ ಜ್ಞಾನ ಬಹಳ ಅಗತ್ಯವಾಗಿದ್ದು, ಅಭ್ಯರ್ಥಿಗಳು ಎದುರಿಸುವ ಪರೀಕ್ಷೆಯಲ್ಲಿ ಈ ಅಂಶಗಳನ್ನು ಪರಿಗಣಿಸುತ್ತಾ ಪರೀಕ್ಷೆ ಎದುರಿಸುವ ಸಂದರ್ಭದಲ್ಲಿ ಯಾವುದೇ ಆತಂಕ ಇರಕೂಡದು ಎಂದರು.
ಇದೇ ವೇಳೆ ಸದರಿ ಅಣುಕು ಪರೀಕ್ಷೆಯನ್ನು ಸೇರಿದಂತೆ ಹಲವಾರು ಅಣುಕು ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಉಚಿತವಾಗಿ ಸಿದ್ಧಪಡಿಸಿ ಕೊಟ್ಟಿದ್ದ ಹಾಗೂ ಸಮಾರಂಭದ ಮುಖ್ಯ ಅತಿಥಿಯಾಗಿ ಹಾಜರಿದ್ದ ಬೆಂಗಳೂರಿನ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಮುಖ್ಯಸ್ಥರಾದ ವೈ.ವಿ. ಗಾಯತ್ರಿಯವರ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ನಿರಂತರವಾಗಿ ಹಲವಾರು ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಹಾಗೂ ಇಂತಹ ಅಣುಕು ಪರೀಕ್ಷೆ, ಕಾರ್ಯಗಾರ, ತರಬೇತಿ ಮತ್ತಿತ್ತರ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಿರುವ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರೂ ವಾಣಿಜ್ಯ ತೆರಿಗೆ ಇಲಾಖೆಯ ಆದ ನಿವೃತ್ತ ಉಪ ಆಯುಕ್ತ ರಮೇಶ್ ನರಸಯ್ಯ ಅವರಿಗೆ ಗೌರವ ಅಭಿನಂದನೆ ಸಲ್ಲಿಸಿ, ನಂತರ ಮಾತನಾಡಿದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ, ನಾಲ್ಕು ವರ್ಷದಿಂದ ನಗರ ಕೇಂದ್ರ ಗ್ರಂಥಾಲಯವು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಉಪಯೋಗಕ್ಕೆಂದು ವಿಶೇಷ ತರಬೇತಿ ಶಿಬಿರ ಹಾಗೂ ಉಚಿತ ಅಣುಕು ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಪ್ರಸ್ತುತ ನಡೆದದ್ದು ಮೊದಲನೆಯ ಅಣುಕು ಪರೀಕ್ಷೆಯಾಗಿದ್ದು, ಇದೇ ಗುರುವಾರದಂದು ಅಂದರೆ ದಿ: ೦೧.೧೦.೨೦೨೬ ರಂದು ಎರಡನೇ ಹಾಗೂ ಅಂತಿಮ ಅಣುಕು ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕರಾದ ಸೌಮ್ಯ ಎಸ್. ಮತ್ತು ಸಿಬ್ಬಂದಿಗಳು ಹಾಜರಿದ್ದರು.