
ಪಿರಿಯಾಪಟ್ಟಣ: 150 ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ನೇತೃತ್ವದಲ್ಲಿ ಬೆಟ್ಟದಪುರದಿಂದ ಪಿರಿಯಾಪಟ್ಟಣದ ತಾಲ್ಲೂಕು ಆಡಳಿತ ಭವನದ ವರೆಗೆ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ರಾಜ್ಯದಲ್ಲಿ ಆಗುತ್ತಿರುವ ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಇದಕ್ಕೆ ಕಾರಣ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷವಾಗಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ಒಳಪಡಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಸರ್ಕಾರ ತನಿಖೆ ನಡೆಸಬೇಕು ಈ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ನೆಮ್ಮದಿಯಾಗಿ ಕುಳಿತು ಜೀವನ ಸಾಗಿಸುತ್ತಿದ್ದಾರೆ ಇದರಿಂದ ರೈತರ ಸಂಕಷ್ಟ ಅರಿವಾಗುತ್ತಿಲ್ಲ. ಚೆಸ್ಕಾಂ ಕಚೇರಿಯ ಮುಂಭಾಗ ಧರಣಿ ನಡೆಸುತ್ತೇನೆ. ಬರಪೀಡಿತ ಪ್ರದೇಶಕ್ಕೆ ರೈತರಿಗೆ 2,500 ಗಳನ್ನು ಘೋಷಿಸಿರುವುದು ಅವಮಾನದ ಸಂಗತಿಯಾಗಿದೆ. ಬರ ಪರಿಹಾರಕ್ಕಾಗಿ 50,000 ರೂಗಳನ್ನು ನೀಡಬೇಕು. ಸಾಕಷ್ಟು ಸಮಸ್ಯೆಗಳನ್ನು ಹೊತ್ತು ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಆದರೂ ಕೂಡ ಶಾಸಕರು ನೆಮ್ಮದಿಯಾಗಿ ಮನೆಯಲ್ಲಿ ಮಲಗಿದ್ದಾರೆ. ರೈತರ ಜೀವನವಾಗಿರುವ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಚೆಸ್ಕಾಂ ಇಲಾಖೆಗಳು ಕುಂಭಕರ್ಣವಾಗಿದ್ದಾರೆ. ನೆಪ ಮಾತ್ರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಕರೆಸಿ ಪ್ರಜಾ ಸೇವಾ ಕಾರ್ಯಕ್ರಮ ಮಾಡಿದ್ದೀರಾ ಅದರಲ್ಲಿ ಕೂಡ ಸಾರ್ವಜನಿಕರು ಸಾವಿರಾರು ಸಮಸ್ಯೆಗಳನ್ನು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದು ತಾಲೂಕಿನ ಅಭಿವೃದ್ಧಿಯೇ ?
ರೈತ ಸಂಘಟನೆಗಳು ತಮ್ಮಲ್ಲಿ ಅಹವಾಲು ಹೇಳಿಕೊಳ್ಳಲು ಬಂದರೆ ನಡೆ ನಡೆ ಎಂದು ಓಡಿಸುತ್ತೀರಾ ನಿಮ್ಮನ್ನು ಕೂಡ ಓಡಿಸುವ ಸಮಯ ಬರುತ್ತದೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಆಗ ನಿಮಗೆ ಅರಿವಾಗುತ್ತದೆ ರೈತರ ಕಷ್ಟ ಏನು ಎಂದು. ನನ್ನ ಜೀವವಿರುವವರೆಗೂ ರೈತರಿಗಾಗಿ ಹೋರಾಟ ನಡೆಸುತ್ತೇನೆ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರಾಜಕಾರಣಿಗಳು ನೆಪ ಮಾತ್ರಕ್ಕೆ ರೈತರು ಈ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುತ್ತಾರೆ ಆದರೆ ಅವರ ಸಂಕಷ್ಟವನ್ನು ಅರಿತುಕೊಳ್ಳುತ್ತಿಲ್ಲ. ರೈತರು ಅಲ್ಪ ಪ್ರಮಾಣದ ಜಮೀನಿನಲ್ಲಿ ಜೀವನಕ್ಕಾಗಿ ಬೇಸಾಯ ಮಾಡುತ್ತಿದ್ದಾರೆ ಆದರೆ ನೀವು ಟೌನ್ಷಿಪ್ ಮಾಡುತ್ತೇವೆ ಎಂದು ಎಲ್ಲಾ ಜಾಗವನ್ನು ಕಬಳಿಸುವ ಕೆಲಸ ಮಾಡುತ್ತಿದ್ದೀರಾರ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ರೈತರ ಪರವಾಗಿ ಕಾಲ್ನಡಿಗೆ ಜಾಥ ಹಮ್ಮಿಕೊಂಡು ಸಮಸ್ಯೆ ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ ಆದರೆ ರಾಜ್ಯ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ. ಅಲ್ಲದೆ ಕಾಮಗಾರಿಗಳು ಮಾಡಿರುವ ಗುತ್ತಿಗೆದಾರರಿಗೆ ಹಣ ಪಾವತಿಯಾಗದೆ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೈತರು ಜನಸಾಮಾನ್ಯರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ನಿಮ್ಮ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಅಧಿಕಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ಭಾಗವಾದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಭಾಗವಾಗಿದ್ದಾರೆ.
ತಾಲೂಕಿನಲ್ಲಿ ಜನಸಾಮಾನ್ಯರಿಗೆ, ರೈತರಿಗೆ ತೊಂದರೆ ಯಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ರಾಗಿ ಖರೀದಿಸಿ ಬಹಳ ದಿನಗಳಾದರೂ ಕೂಡ ಖರೀದಿಯ ಹಣವನ್ನು ಸರ್ಕಾರ ಬರಿಸಿಲ್ಲ. ಮುಂದಿನ ದಿನಗಳಲ್ಲಿ ರಾಗಿ ಖರೀದಿಸಲು ರೈತರು ಬಿಡುವುದಿಲ್ಲ. ತಾಲೂಕನ್ನು ಪ್ರವಾಸೋದ್ಯಮ ತಾಣವಾಗಿಸಿಲ್ಲ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಾಗಿದೆ ಅಂತರ್ಜಲ ಬತ್ತಿ ಹೋಗಿದೆ. ಬೇಸಾಯ ಮಾಡಲು ನೀರಿಲ್ಲದಾಗಿದೆ. ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆ. ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಮಹೇಶ್, ಐಲಾಪುರ ರಾಮು, ಸಿ.ಎನ್. ರವಿ, ಲೋಕೇಶ್ , ಪೆಪ್ಸಿ ಕುಮಾರ್, ಆಲನಹಳ್ಳಿ ಗಣೇಶ್, ಎ.ಟಿ. ರಂಗಸ್ವಾಮಿ, ಕೆ.ಕೆ.ಕುಮಾರ್, ಮಾಕೋಡು ಜವರಪ್ಪ, ಹುಣಸೆಕುಪ್ಪೆ ಚಂದ್ರೆಗೌಡ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
