
ನಂಜನಗೂಡು; ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೈತರ ಜಮೀನಿಗೆ ಹರಿಯುವ ನಾಲಾ ನೀರನ್ನು ಅಕ್ರಮವಾಗಿ ಬಳಸುವ ಜೊತೆಗೆ ರಾಜಧನ ಪಾವತಿಸದೆ ಅನಧಿಕೃತವಾಗಿ ಸಾವಿರಾರು ಟನ್ ನಾಲಾ ಏರಿ ಮಣ್ಣನ್ನು ಬಳಸಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ನೇತೃತ್ವದಲ್ಲಿ ನಂಜನಗೂಡು ನಗರದ ನೀರಾವರಿ ಇಲಾಖೆ ಕಚೇರಿ ಮುಂಭಾಗ ಜಮಾವಣೆಗೊಂಡ ರೈತರು ಗುತ್ತಿಗೆದಾರ ಹಾಗೂ ಹೆದ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್ ಮಾತನಾಡಿ, ನಂಜನಗೂಡು ನಗರದ ಹೊರ ವಲಯದಲ್ಲಿರುವ ಹೊಸಹಳ್ಳಿ ಗೇಟ್ ಬಳಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಯಾವುದೇ ಸುರಕ್ಷತಾ ಮಾನದಂಡವನ್ನು ಅಳವಡಿಸದ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚಾಗಿದ್ದು ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಕಳಪೆ ಕಾಮಗಾರಿ ನಡೆಸಿ ಯುವಕನ ಸಾವಿಗೆ ಕಾರಣಕರ್ತರಾದ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಿ ನ್ಯಾಯ ಒದಗಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಕಾಮಗಾರಿಗಾಗಿ ಅನಧಿಕೃತವಾಗಿ ನಾಲಾ ನೀರು ಬಳಕೆ ಹಾಗೂ ರಾಜಧನ ಪಾವತಿಸದೆ ಸಾವಿರಾರು ಟನ್ ನಾಲಾ ಏರಿ ಮಣ್ಣನ್ನು ಬಳಸಿಕೊಂಡಿದ್ದು ಮುಂಬರುವ ಶನಿವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ, ನಂಜುAಡ, ಮೋಹನ್, ರವಿಚಂದ್ರ, ಸಿದ್ದೇಗೌಡ, ಮಂಜು, ರವಿ ಸೇರಿದಂತೆ ಹಲವಾರು ಮಂದಿ ರೈತರು ಭಾಗವಹಿಸಿದ್ದರು.
ಚಿತ್ರ(8 ಎನ್ಜಿಡಿ1) ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನೀರಾವರಿ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.