
ಮೈಸೂರು; ಹಾರ್ಟ್ ಸಂಸ್ಥೆಯ ವತಿಯಿಂದ ಗುರುವಾರ ಸಂಸ್ಥೆಯ ಸಭಾಂಗಣದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಸುಮಾರು ೩೬ ಶಿಬಿರಾರ್ಥಿಗಳು ಭಾಗವಹಿಸಿ ಅಣಬೆ ಕೃಷಿ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ತರಬೇತಿ ಪಡೆದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಶ್ರೀರಾಂಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಟೆಹುಂಡಿ ಮಹದೇವ ಮಾತನಾಡಿ , ಉದ್ಯಮಿಗಳು ಯಾವುದೇ ಉದ್ಯಮವನ್ನು ಆರಂಭಿಸಲು ಪರಿಶ್ರಮ, ತಾಳ್ಮೆ, ಶಿಸ್ತು, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸ ಅತ್ಯಗತ್ಯ ಎಂದು ತಿಳಿಸಿದರು. ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಹೇಳಿದರು.
ಮೈಸೂರು ಜಿಲ್ಲಾ ಪಂಚಾಯತಿಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಎಂ. ಮಾತನಾಡಿ, ಅಣಬೆ ಬೇಸಾಯದ ಮೂಲಕ ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು. ಅಲ್ಲದೆ, ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳು, ಸೇವೆಗಳು ಮತ್ತು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಸನ್ನ, ಅಣಬೆ ಬೇಸಾಯದ ಕುರಿತು ತಾಂತ್ರಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು. ಅಣಬೆ ಕೃಷಿಯ ವಿಧಾನಗಳು, ಅಗತ್ಯ ಸಿದ್ಧತೆಗಳು, ಉತ್ಪಾದನಾ ಪ್ರಕ್ರಿಯೆ ಮತ್ತು ಆದಾಯ ಗಳಿಸುವ ಅವಕಾಶಗಳ ಕುರಿತು ವಿವರಿಸಿದರು.
ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಂಸ್ಥೆಯ ಧ್ಯೇಯೋದ್ದೇಶಗಳು, “ಮಾನವೀಯತೆ ಮತ್ತು ಸಾಮರಸ್ಯಯುಕ್ತ ಸಮಾಜದ ನಿರ್ಮಾಣ” ಎಂಬ ದೂರದೃಷ್ಟಿ ಹಾಗೂ ಆರೋಗ್ಯ, ಶಿಕ್ಷಣ, ಪುನರ್ವಸತಿ ಮತ್ತು ಜೀವನೋಪಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ತರಬೇತಿ ಕಾರ್ಯಕ್ರಮಗಳ ಮೂಲಕ ಯುವಜನರು, ಮಹಿಳೆಯರು ಹಾಗೂ ಗ್ರಾಮೀಣ ಸಮುದಾಯದವರು ಕೌಶಲ್ಯಗಳನ್ನು ಬೆಳೆಸಿಕೊಂಡು ಸ್ವಂತ ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂಬುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.