
ಮೈಸೂರು; ಯುವ ಸಮೂಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ಮೈಸೂರಿನ ನಗರದ ಓವಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,
ಕನ್ನಡದಲ್ಲಿ ಬರೆಯುವ, ಓದುವ, ಸಂಶೋಧನೆ ಮಾಡುವ ಮತ್ತು ಹೊಸ ಆಲೋಚನೆಗಳನ್ನು ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಸರಿಯಾದ ಬಳಕೆಯನ್ನು ಉತ್ತೇಜಿಸಬೇಕು. ಕನ್ನಡದ ಪುಸ್ತಕಗಳನ್ನು ಓದಬೇಕು. ಕನ್ನಡದ ಕವಿಗಳು, ಲೇಖಕರು, ಕಲಾವಿದರು ಮತ್ತು ಚಿಂತಕರ ಸಾಧನೆಗಳನ್ನು ಪರಿಚಯಿಸಬೇಕು. ಕನ್ನಡದ ಹೆಸರಿನಲ್ಲಿ ಕೇವಲ ಘೋಷಣೆಗಳನ್ನು ಕೂಗುವುದಷ್ಟೇ ಸಾಕಾಗುವುದಿಲ್ಲ. ನಮ್ಮ ನಡವಳಿಕೆಯಲ್ಲಿ, ಕೆಲಸದಲ್ಲಿ ಮತ್ತು ಸಮಾಜದೊಂದಿಗಿನ ಸಂಬAಧಗಳಲ್ಲಿ ಕನ್ನಡದ ಮೌಲ್ಯಗಳ ಅಸ್ತಿತ್ವ ಇರಬೇಕು ಎಂದರು.
ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞ, ಕನಕದಾಸ, ಪುರಂದರದಾಸ, ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತರು ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನ ಸಾಹಿತ್ಯವು ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದೆ. ದಾಸ ಸಾಹಿತ್ಯವು ಭಕ್ತಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದೆ ಎಂದು ಹೇಳಿದರು.
ಕನ್ನಡ ಭಾಷೆಯನ್ನು ನಾವು ದೈನಂದಿನ ಬದುಕಿನಲ್ಲಿ ಎಷ್ಟು ಪ್ರೀತಿಯಿಂದ ಬಳಸುತ್ತೇವೆ, ಮಕ್ಕಳಿಗೆ ಎಷ್ಟು ಪರಿಣಾಮಕಾರಿಯಾಗಿ ಕಲಿಸುತ್ತೇವೆ ಮತ್ತು ಆಧುನಿಕ ಜಗತ್ತಿಗೆ ಹೊಂದುವAತೆ ಎಷ್ಟು ಬೆಳೆಸುತ್ತೇವೆ ಎಂಬುದರಲ್ಲಿಯೂ ಇದೆ.
ಮನೆಯಲ್ಲಿಯೇ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡ ಸಾಹಿತ್ಯ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಇತರ ಭಾಷೆಗಳನ್ನು ಕಲಿಯುವುದು ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ. ಆದರೆ ಅದಕ್ಕಾಗಿ ನಮ್ಮ ಮಾತೃಭಾಷೆಯನ್ನು ಕಡೆಗಣಿಸಬೇಕಾದ ಅಗತ್ಯವಿಲ್ಲ. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳಿಗೂ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯಸಾಮಗ್ರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಅವಕಾಶಗಳು ದೊರೆಯಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕಾನೂನು ಮತ್ತು ಆಡಳಿತಕ್ಕೆ ಸಂಬAಧಿಸಿದ ಗುಣಮಟ್ಟದ ಮಾಹಿತಿ ಲಭ್ಯವಾಗಬೇಕು. ಕನ್ನಡದಲ್ಲಿ ಡಿಜಿಟಲ್ ಪುಸ್ತಕಗಳು, ಶೈಕ್ಷಣಿಕ ವಿಡಿಯೊಗಳು, ಆನ್ಲೈನ್ ಪಾಠಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕಾ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಬೇಕು. ಯುವಜನರು ಕನ್ನಡ ಭಾಷೆಯಲ್ಲಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಕನ್ನಡದ ಮೂಲಕ ಉದ್ಯಮಶೀಲತೆ, ಸಂಶೋಧನೆ ಮತ್ತು ಸೃಜನಶೀಲತೆಗೆ ಹೊಸ ದಾರಿಗಳನ್ನು ತೆರೆಯಬೇಕು. ಕನ್ನಡವನ್ನು ಕೇವಲ ಭಾವನೆಯ ಭಾಷೆಯಾಗಿ ನೋಡದೆ, ಜ್ಞಾನ, ಉದ್ಯೋಗ, ವಿಜ್ಞಾನ ಮತ್ತು ಆಡಳಿತದ ಭಾಷೆಯಾಗಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ 30 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡು ಚಾಲ್ತಿಯಲ್ಲಿವೆ. 13 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಹೊಸದಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, 3 ಯೋಜನೆಗಳು ಮುಕ್ತಾಯದ ಹಂತದಲ್ಲಿರುತ್ತವೆ. 13 ಯೋಜನೆಗಳು ಅನುಷ್ಠಾನಗೊಂಡ ನಂತರ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಂಸ್ಕರಿಸಿದ ನದಿ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಸನ್ಮಾನ: ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡ, ರಘು(ಕೌಟಿಲ್ಯ), ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ಕನ್ನಡ ಪರ ಹೋರಾಟಗಾರರು ಗಣ್ಯರು ಉಪಸ್ಥಿತರಿದ್ದರು.
ಭುವನೇಶ್ವರಿಗೆ ಪೂಜೆ ಸಲ್ಲಿಕೆ; ಕಾರ್ಯಕ್ರಮಕ್ಕೂ ಮುನ್ನಾ ಸಚಿವರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು. ಬಳಿಕ ಭುವನೇಶ್ವರಿಯ ಪ್ರತಿಮೆಯ ಮೆರವಣಿಗೆ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ನಡೆಯಿತು.