
ಮೈಸೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ಅವಧಿ ಮೀರಿದ ಹಾಗೂ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ 24 ಲಕ್ಷರೂ ಮೌಲ್ಯದ ಮದ್ಯವನ್ನು ಗುರುವಾರ ನಾಶಪಡಿಸಿದರು.
ಅಬಕಾರಿ ಉಪ ಆಯುಕ್ತ ವಿವೇಕ್ ಜೆ. ಅವರ ಆದೇಶದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ವಿಕ್ರಮ್ ಎಲ್.ಬಿ., ಕೆಎಸ್ಬಿಸಿಎಲ್ ಲಿಕ್ಕರ್ ಡಿಪೋ ಹಾಗೂ ಮೈಸೂರು ಉಪ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಮೈಸೂರು ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್ ಬಿಸಿಎಲ್ ಲಿಕ್ಕರ್ ಡಿಪೋ ಮೈಸೂರು-1 ಮತ್ತು ಮೈಸೂರು-2ರಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ವಿವಿಧ ಬ್ರಾಂಡ್ ಗಳ ಅವಧಿ ಮೀರಿದ 929 ರೆಡಿ ಪ್ಯಾಕ್ಗಳ 8,870 ಲೀಟರ್ ಬಿಯರ್ ಹಾಗೂ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದ 138 ರೆಡಿ ಪ್ಯಾಕ್ ಗಳ 1,216 ಲೀಟರ್ ವೈನ್ ನಾಶಪಡಿಸಲಾಯಿತು. ನಾಶಪಡಿಸಲಾದ ಮದ್ಯದ ಒಟ್ಟು ಮೌಲ್ಯ ಸುಮಾರು 24 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಕೆಎಸ್ಬಿಸಿಎಲ್ ಮೈಸೂರು-1 ಡಿಪೋದ ಮಳಿಗೆ ವ್ಯವಸ್ಥಾಪಕ ಡಿ.ಕೆ. ವೆಂಕಟೇಶ್, ಮೈಸೂರು-2 ಡಿಪೋದ ಮಳಿಗೆ ವ್ಯವಸ್ಥಾಪಕ ಯೋಗೇಶ್ ಎಂ.ಆರ್., ಅಬಕಾರಿ ನಿರೀಕ್ಷಕರಾದ ನಂದಿತ ಹಳದನಕರ್ ಹಾಗೂ ರಾಧಾ ಎಸ್.ಪಿ., ಅಬಕಾರಿ ಉಪ ನಿರೀಕ್ಷಕ ಆನಂದ್ ಸೇರಿದಂತೆ ಅಬಕಾರಿ ಇಲಾಖೆ ಮತ್ತು ಡಿಪೋ ಸಿಬ್ಬಂದಿ ಉಪಸ್ಥಿತರಿದ್ದರು.