
ಮೈಸೂರು; ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ವೇದಿಕೆ ಮತ್ತು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಯಿತು. ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿ.ಎಸ್.ಟಿ.ಆರ್.ಐ.ನ ನಿವೃತ್ತ ಹಿರಿಯ ವಿಜ್ಞಾನಿ ಡಾ. ಟಿ. ತಿಪ್ಪೇಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು. ಹಸಿರು ಮನೆ ಅನಿಲಗಳು ಪರಿಸರದ ಮೇಲೆ ಉಂಟು ಮಾಡುವ ದುಷ್ಪರಿಣಾಮಗಳು, ಅವುಗಳಿಂದ ಉಂಟಾಗುವ ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಕುರಿತು ಮಾಹಿತಿ ನೀಡಿದರು. ಓಝೋನ್ ಪದರದ ಕ್ಷಯಿಸುವಿಕೆ ಮತ್ತು ಅದರ ಪರಿಣಾಮವಾಗಿ ಭೂಮಿಗೆ ತಲುಪುವ ಹಾನಿಕಾರಕ ನೇರಳಾತೀತ ಕಿರಣಗಳ ಅಪಾಯಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಮುಖ್ಯವಾಗಿ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಟಿಬದ್ಧವಾಗಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾ ಹೆಚ್ ಸತ್ಯಪ್ರಸಾದ್ ಮಾತನಾಡಿ, ಮಾನವನ ಆರೋಗ್ಯಕ್ಕೆ ಶುದ್ಧವಾದ ಗಾಳಿ ಮತ್ತು ಉತ್ತಮ ಗುಣಮಟ್ಟದ ನೀರಿನ ಅವಶ್ಯಕತೆ ಇದ್ದು ಅದನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದು. ಜವಾಬ್ದಾರಿಯುತ ಪ್ರಜೆಗಳಾಗಿ ನಾವೆಲ್ಲರೂ ಪರಿಸರವನ್ನು ಸಂರಕ್ಷಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ನಮ್ಮ ಮುಂದಿನ ಜನಾಂಗಕ್ಕೆ ಮಲಿನಗೊಳ್ಳದ ಪರಿಸರವನ್ನು ಉಳಿಸಬೇಕು ಎಂದು ಹೇಳಿದರು. ಶ್ರೀವಿದ್ಯಾ ಪರಿಸರ ಜಾಗೃತಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ತ್ರಿಷಾ, ಗಾಯಿತ್ರಿ, ನಿಧಿಶ್ರೀ, ಚಿನ್ಮಯಿ, ಉಪನ್ಯಾಸಕಿ ಇಂದಿರಾ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.