
ಮೈಸೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಕೋಟ್ಯಾಂತರ ರೂ ಹಗರಣ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರದಿಂದ ಮೈಸೂರಿನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ.
ಮೈಸೂರಿನ ಸಿದ್ದರ್ಥಾ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸಚಿವ ನಾಗೇಂದ್ರ, ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಸರ್ಕಾರ ಅಧಿಕಾರದಕ್ಕೆ ಬಂದಾಗಲೆಲ್ಲಾ ಬಹುದೊಡ್ಡ ಹಗರಣಗಳೇ ನಡೆಯುತ್ತಿವೆ. ಬೋಫೋರ್ಸ್ ಫಿರಂಗಿ ಹಗರಣದಿಂದ ಹಿಡಿದು 5 ಜಿ ಹಂಚಿಕೆ, ಕಾಮನ್ ಹೆಲ್ತ್ ಹಗರಣಗಳು ನಡೆದಿವೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ ಹಗರಣ ನಡೆದಿದೆ. ಸದನದಲ್ಲಿಯೇ ಸಿಎಂ ಸಿದ್ದರಾಮಯ್ಯ ಅದನ್ನು ಒಪ್ಪಿಕೊಂಡರು. ಆಗ ಸಚಿವರಾಗಿದ್ದ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಗರಣದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿ, ಸನ್ಮಾನವನ್ನೂ ಕೂಡ ಮಾಡಲಾಗಿದೆ ಇದು ಖಂಡನೀಯ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಗರಣದಲ್ಲಿಯೇ ಮುಳುಗಿದೆ. ಅಭಿವೃದ್ಧಿ ಕೆಲಸಗಳಾವುದು ನಡೆಯುತ್ತಿಲ್ಲ, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕುವ ತನಕ, ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ತನಕ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಬಿಜೆಪಿ ಘಟಕದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಸಹ ಪ್ರಬಾರಿ ಈ.ಸಿ.ನಿಂಗರಾಜೇಗೌಡ, ಮಾಜಿ ಮೇಯರ್ ಶಿವಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು,ಜಿಲ್ಲಾ ಮುಖಂಡರು ಮಾಜಿ ಪೌರರು, ಉಪ ಮಹಾ ಪೌರರು, ಮಾಜಿ ನಗರ ಪಾಲಿಕೆ ಸದಸ್ಯರು . ಮಾಜಿ ನಿಗಮ ಮಂಡಳಿ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು. ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರು, ಸಹ ಸಂಚಾಲಕರು. ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮಂಡಲ ಪದಾಧಿಕಾರಿಗಳು,ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ,ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು , ಶಕ್ತಿ ಕೇಂದ್ರ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದಾರೆ.