
ಮೈಸೂರು: ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಂI) ಬೆಳವಣಿಗೆಯ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಹಿತಿ ಲಭ್ಯವಿದ್ದರೂ, ಶಿಕ್ಷಕರ ಸ್ಥಾನವನ್ನು ಎಂದಿಗೂ ಯಾವುದೇ ತಂತ್ರಜ್ಞಾನವೂ ಭರ್ತಿ ಮಾಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶನಿವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ 138 ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಶಿಕ್ಷಣ ಎಂದರೆ ಕೇವಲ ಮಾಹಿತಿಯನ್ನು ನೀಡುವುದಷ್ಟೇ ಅಲ್ಲ, ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ, ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರವನ್ನು ರೂಪಿಸುವುದಾಗಿದೆ. ಇಂತಹ ಶ್ರೇಷ್ಠ ಕೆಲಸವನ್ನು ಶಿಕ್ಷಕರು ಮಾತ್ರ ಮಾಡಲು ಸಾಧ್ಯ. ನಮ್ಮ ಸಂಸ್ಕöÈತಿಯಲ್ಲಿ ಗುರುಗಳಿಗೆ ಹರಿಹರ ಮತ್ತು ಬ್ರಹ್ಮನಿಗೆ ಸಮಾನವಾದ ಸ್ಥಾನ ನೀಡಲಾಗಿದ್ದು, ಸಮಾಜದಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದರು.
ರಾಜ್ಯ ಸರ್ಕಾರದ ಹಂತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿರುವುದಾಗಿ ಅವರು ಭರವಸೆ ನೀಡಿದರು. ಶಾಲಾ ಕಟ್ಟಡಗಳ ಸೌಲಭ್ಯ, ಕೊಠಡಿಗಳ ದುರಸ್ತಿ ಹಾಗೂ ಶಿಕ್ಷಕರ ಅಭಾವವನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಈಗಾಗಲೇ ಸುಮಾರು 15,000 ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಸಾರ್ವಜನಿಕ ಮತ್ತು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿ, ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಕ ವೃಂದದವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಮತ್ತು ಶುಭಾಶಯಗಳನ್ನು ತಿಳಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಇಂದಿನ 21ನೇ ಶತಮಾನದ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಬೋಧನಾ ಸವಾಲುಗಳನ್ನು ಎದುರಿಸಲು ಶಿಕ್ಷಕರು ಕಾಲಕಾಲಕ್ಕೆ ತಕ್ಕಂತೆ ಬದಲಾಗುವುದು ಅತ್ಯಗತ್ಯ. ಶಿಕ್ಷಣ ಇಲಾಖೆಯ ಸೌಲಭ್ಯಗಳು, ಸುತ್ತೋಲೆಗಳು ಹಾಗೂ ನೂತನ ನಿಯಮಾವಳಿಗಳ ಮೂಲಕ ಶಿಕ್ಷಣದ ಮಟ್ಟವನ್ನು ಎತ್ತರಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಪ್ರತಿಯೊಬ್ಬ ಶಿಕ್ಷಕನು ವೃತ್ತಿಯಲ್ಲಿ ನಿರಂತರವಾಗಿ ಒಬ್ಬ ‘ವಿದ್ಯಾರ್ಥಿ’ಯಾಗಿ ಕಲಿಯುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತ್ಯುತ್ತಮ ಅರ್ಹತೆ ಹೊಂದಿದ ಶಿಕ್ಷಕರಿದ್ದರೂ, ಖಾಸಗಿ ವಲಯಕ್ಕೆ ಹೋಲಿಸಿದಾಗ ಫಲಿತಾಂಶ ಮತ್ತು ಬದಲಾವಣೆಯನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಕೆಲವು ಕೊರತೆಗಳು ಕಾಣಿಸುತ್ತಿವೆ. ಶಿಕ್ಷಕರು ಕೇವಲ ಬೋಧನೆಗೆ ಸೀಮಿತವಾಗದೆ, ಉತ್ತಮ ಸಮಾಜವನ್ನು ನಿರ್ಮಿಸುವ ದಾರಿದೀಪವಾಗಬೇಕು. ಕೇವಲ ವೇತನ, ಭತ್ಯೆ ಅಥವಾ ಬಡ್ತಿಗಳಿಗೆ ಆದ್ಯತೆ ನೀಡದೆ, ತರಗತಿಯಲ್ಲಿ ಧನಾತ್ಮಕ ಕಲಿಕಾ ವಾತಾವರಣವನ್ನು ನಿರ್ಮಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು.
ಭಾರತೀಯ ಭಾಷೆಗಳ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ. ಸಿ. ಜಿ. ವೆಂಕಟೇಶ ಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ. ಹರೀಶ್‌ಗೌಡ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ರಂಗಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉದಯ್ ಕುಮಾರ್, ದಕ್ಷಿಣ ವಲಯದ ಶಿಕ್ಷಣಾಧಿಕಾರಿ ಕೃಷ್ಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಅರುಣ್ ಕುಮಾರ್ ಬಿ. ಪಿ, ಮತ್ತು ಶಿಕ್ಷಕ ವೃಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು