
ಮೈಸೂರು; ನಗರಪಾಲಿಕೆಯ ವ್ಯಾಪ್ತಿಯಲ್ಲಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕೂಡಲೇ ಬಾಕಿಯನ್ನು ವಸೂಲಿ ಮಾಡುವಂತೆ ನಗರಪಾಲಿಕೆಯ ಆಯುಕ್ತೆ ಸವಿತಾ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ತೆರಿಗೆ ಬಾಕಿದಾರರ ಕುರಿತು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ವೀಣಾ, ಉಪ ಆಯುಕ್ತರು (ಕಂದಾಯ) ಸೋಮಶೇಖರ್ ಹಾಗೂ ವಲಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರೊಂದಿಗೆ ಸೋಮವಾರ ವಿಶೇಷ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ನ ತೆರಿಗೆ ಬಾಕಿದಾರರ ವಿವರಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ದೀರ್ಘಕಾಲದಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಸರ್ಕಾರದ ನಿಯಮಗಳು ಹಾಗೂ ೨೦೨೫ರ ರಾಜ್ಯಪತ್ರ ಅಧಿಸೂಚನೆಯನ್ವಯ, ತೆರಿಗೆ ಬಾಕಿದಾರರಿಗೆ ನಿಗದಿತ ಕಾನೂನು ಪ್ರಕ್ರಿಯೆಯಂತೆ ಮೊದಲನೇ ನೋಟಿಸ್, ಎರಡನೇ ನೋಟಿಸ್ ಹಾಗೂ ಮೂರನೇ ನೋಟಿಸ್ ಜಾರಿಗೊಳಿಸಬೇಕು. ಈ ನೋಟಿಸ್ಗಳನ್ನು ಜಾರಿಗೊಳಿಸಿದ ನಂತರವೂ ಬಾಕಿ ತೆರಿಗೆಯನ್ನು ಪಾವತಿಸದಿದ್ದಲ್ಲಿ, ಅನ್ವಯಿಸುವ ಕಾನೂನು ನಿಯಮಗಳನ್ವಯ ಆಸ್ತಿಯನ್ನು ಜಪ್ತಿ ಮಾಡುವುದೂ ಸೇರಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ.
ಈ ಹಿನ್ನೆಲೆಯಲ್ಲಿ, ತೆರಿಗೆ ಬಾಕಿ ಇರುವ ಪ್ರಕರಣಗಳಲ್ಲಿ ನೋಟಿಸ್ ಜಾರಿ ಪ್ರಕ್ರಿಯೆಯನ್ನು ಇದೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿಯೂ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಗೆ ಪಾವತಿಸಬೇಕಾದ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿ ಮಾಲೀಕರು ಯಾವುದೇ ಕಾನೂನು ಕ್ರಮಕ್ಕೆ ಅವಕಾಶ ನೀಡದೆ, ತಮ್ಮ ಬಾಕಿ ತೆರಿಗೆಯನ್ನು ಕೂಡಲೇ ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ