
ಮೈಸೂರು: ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಆದರೆ ದಲಿತರನ್ನು ಮುಖ್ಯಮಂತ್ರಿ ಮಾಡದೆ ವಂಚಿಸುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದರು.
ಬುಧವಾರ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ತಕರಾರು ಇಲ್ಲ. ಆದರೆ, ದಲಿತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಕಳೆದ ೭೦ ವರ್ಷದಿಂದ ವಂಚನೆ ಮಾಡುತ್ತಿದೆ. ಹಾಗಾಗಿ, ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಸೀಡ್‌ಲೆಸ್ ಮತ್ತು ಶುಗರ್ ಲೆಸ್ ರೀತಿ ಆಗಿದ್ದಾರೆ. ಯಾರಿಗೂ ನಮಗೆ ಸಿಎಂ ಕೊಡಿ ಎಂದು ಕೇಳುವ ತಾಕತ್ತು ಇಲ್ಲ. ಕಾಂಗ್ರೆಸ್ ಪಕ್ಷ ದಲಿತರಿಗೆ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಹಿಂದೆ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಈಗಲಾದರೂ ಸಿದ್ದರಾಮಯ್ಯನವರು ದಲಿತರಾದ ಡಾ.ಜಿ. ಪರಮೇಶ್ವರ್ ಪರ ಅವರು ದ್ವನಿ ಎತ್ತುತ್ತಿಲ್ಲ. ಇದನ್ನು ಕಾಂಗ್ರೆಸ್‌ನಲ್ಲಿರುವ ಎಲ್ಲಾ ದಲಿತರು ಖಂಡಿಸಬೇಕು. ಕಾಂಗ್ರೆಸ್‌ನ ದಲಿತ ನಾಯಕರು ಯಾರು ಕೂಡ ಸಚಿವ ಸ್ಥಾನ ತೆಗೆದುಕೊಳ್ಳದೆ, ಪ್ರತಿಭಟನೆ ಮಾಡಬೇಕು. ಎನ್.ರಾಚಯ್ಯ, ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್, ಖರ್ಗೆ, ಮುನಿಯಪ್ಪ, ಪರಮೇಶ್ವರ್ ವರೆಗೂ ದಲಿತ ನಾಯಕರಿಗೆ ಕಾಂಗ್ರೆಸ್ ಪಕ್ಷ ನಕ್ಷತ್ರ ತೋರಿಸಿ ವಂಚಿಸಿದೆ. ದಲಿತರಿಗೆ ಮೋಸ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಬುದ್ಧಿ ಕಲಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಕೇಳದೆ ಎಲ್ಲವನ್ನೂ ಕೊಡುತ್ತಾರೆ. ದಲಿತರು ಸಿಎಂ ಆಗಬೇಕು ಅಂತ ಕೇಳೋದಿಲ್ಲ. ದಲಿತರು ಸಿಎಂ ಆಗೋದು ಬಿಜೆಪಿಯಲ್ಲಿ ಮಾತ್ರ. ಪವಾಡ ಎಲ್ಲವೂ ನಮ್ಮ ಪಕ್ಷದಲ್ಲಿ ಮಾತ್ರ ಆಗೋದು ಎಂದರು.
ಬಿಜೆಪಿ ಸಂವಿಧಾನ ವಿರೋಧಿ ಅಂತ ಹೇಳುತ್ತಾರೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್. ಕೆಲ ದಲಿತ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ಕಾಂಗ್ರೆಸ್ ಎನ್ನುವ ದೆವ್ವವನ್ನು ದಲಿತರು ತಬ್ಬಿಕೊಳ್ಳುತ್ತಿದ್ದಾರೆ. ದಲಿತರಿಗೆ ಅನ್ಯಾಯ ಮಾಡಿರೋದು ಕಾಂಗ್ರೆಸ್. ಇನ್ನಾದರೂ ದಲಿತರು ಬದಲಾಗಬೇಕಿದೆ. ಎಲ್ಲ ಸಮುದಾಯಗಳನ್ನು ಕಾಂಗ್ರೆಸ್ ವಂಚಿಸುವ ಕೆಲಸ ಮಾಡ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಜಾಬ್‌ನ್ನು ಮತ್ತೆ ಜಾರಿಗೆ ತಂದಿದ್ದಾರೆ. ಯಾವಾಗಲೂ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಅವರ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನೂ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ತಾಲಿಬಾನ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇರುವ ಸಿದ್ದರಾಮಯ್ಯನವರ ಕಾಂಗ್ರೆಸ್ಸಿನ ಸರ್ಕಾರ ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಕೇವಲ ಐದು ಗ್ಯಾರಂಟಿಗಳ ಹೆಸರಿನಲ್ಲಿ ಐದು ವರ್ಷ ಕಳೆಯಬೇಕು ಅಂತಿದ್ದರು. ಅದು ಮೂರು ವರ್ಷಕ್ಕೆ ಮುಕ್ತಾಯ ಆಗುವ ಹಾಗೆ ಕಾಣುತ್ತಿದೆ. ಗ್ಯಾರಂಟಿಗಳು ಕೊಟ್ಟ ಮಾತಿನಂತೆ ನಡೆದಿಲ್ಲ ಎಂದು ಟೀಕಿಸಿದರು.
ಗ್ಯಾರಂಟಿ ಯಾವ ದಾರಿಯಲ್ಲಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ. ಸಚಿವರು ಸದನದಲ್ಲಿ ಸಿಲುಕಿ ಹಾಕಿಕೊಂಡು ಗ್ಯಾರಂಟಿ ಹಣ ಕೊಟ್ಟಿದ್ದಾಗಿ ಸವಾಲು ಹಾಕಿದ್ದರು. ದಾಖಲೆ ಬಿಡುಗಡೆ ಮಾಡಿದ ಬಳಿಕ ಕಣ್ಣೀರು ಹಾಕಿದರು. ಅದಿನ್ನೂ ಕಣ್ಣೀರಿನಲ್ಲೇ ಇದೆಯೇ ಹೊರತು ಜನರಿಗೆ ಹಣ ತಲುಪಿಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿ, ವರ್ಗಗಳಿಗೆ ಗ್ಯಾರಂಟಿಯನ್ನೇ ಕೊಟ್ಟಿಲ್ಲ. ಎಸ್‌ಇಪಿ, ಟಿಎಸ್‌ಪಿಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ೪೨ ಸಾವಿರ ಕೋಟಿ ಇಟ್ಟಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದರಲ್ಲಿ ಶೇ ೫೦ ಇಲಾಖಾ ಕೆಲಸಗಳಿಗೆ ಹೋಗುತ್ತದೆ. ಉಳಿದ ೨೧ ಸಾವಿರ ಕೋಟಿಯಲ್ಲಿ ಗ್ಯಾರಂಟಿಗಾಗಿ ಕಳೆದಿದ್ದಾರೆ; ಇದು ದಲಿತರಿಗೂ ದೋಖಾ. ಕೇವಲ ೭ ಸಾವಿರ ಕೋಟಿ ಕೊಟ್ಟು ೪೨ ಸಾವಿರ ಕೋಟಿ ಕೊಟ್ಟಿದ್ದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ, ಎಸ್ ಸಿ ಮೋರ್ಚಾ ನಗರ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ, ಎಸ್ ಸಿ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ಉಪ ಮೇಯರ್ ಶೈಲೇಂದ್ರ, ಮುಖಂಡರಾದ ಪರಶುರಾಮಪ್ಪ, ಶಿವರಾಜು ಉಪಸ್ಥಿತರಿದ್ದರು.