
ಮೈಸೂರು: ಪಶುಪಾಲನಾ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತರಾದ ಮೈಸೂರು ಜಿಲ್ಲೆಯ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜು ಹಾಗೂ ಪತ್ನಿ ಡಾ. ಆರ್. ಜಯಮಾಲರವರನ್ನು ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ಹಾಗೂ ಸಿಬ್ಬಂದಿವರ್ಗದವರು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.
ನಗರದ ಪಶುಪಾಲನಾ ಇಲಾಖೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಗರಾಜು, ನಾನು ಬೀದರ್, ಮೇಲುಕೋಟೆ, ಬೆಂಗಳೂರು, ತಿಪಟೂರು, ಮೈಸೂರಿನಲ್ಲಿ ಪಶು ವೈದ್ಯಾಧಿಕಾರಿಯಾಗಿ, ಸಹಾಯಕ ನಿರ್ದೇಶಕರಾಗಿ, ಉಪನಿರ್ದೇಶಕರಾಗಿ ಕೆಲವು ಕಾಲ ಜಂಟಿ ನಿರ್ದೇಶಕರಾಗಿ, ಹೆಚ್.ಡಿ. ಕೋಟೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ.
ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು, ಪಶುಸಂಗೋಪನಾ ಸಚಿವರಾಗಿದ್ದ ಕೆ. ವೆಂಕಟೇಶ್‌ರವರ ಸಹಕಾರದಿಂದ ಜಿಲ್ಲೆಯಲ್ಲಿ 17 ಹೊಸ ಆಸ್ಪತ್ರೆ ನಿರ್ಮಾಣವಾಗಿವೆ. ಇದಲ್ಲದೇ ಕಿರಿಯ ಪಶುವೈದ್ಯ ಪರೀಕ್ಷಕರ ನೇಮಕ, 12 ಜನ ಗುತ್ತಿಗೆ ಪಶುವೈದ್ಯರ ನೇಮಕ, 180 ಜನ ಡಿ-ಗ್ರೂಪ್ ಗುತ್ತಿಗೆ ನೌಕರರನ್ನು ನೇಮಕ ಮಾಡಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ರೈತರ, ಬಡವರ ಬದುಕನ್ನು ಹಸನು ಮಾಡಲು ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ. ಪಿ. ಶ್ರೀನಿವಾಸ್ ಮಾತನಾಡಿ, ನಾಗರಾಜುರವರು ಇಲಾಖೆಯಲ್ಲಿ ರೈತರು, ಬಡವರಪರ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ದಸರಾ ಸಂದರ್ಭದಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನ ಪ್ರದರ್ಶನವನ್ನು ರಾಷ್ಟçಮಟ್ಟದಲ್ಲಿ ನಡೆಸಿ ಯಶಸ್ವಿಯಾಗಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದರು.
ಸಮಾರAಭದಲ್ಲಿ ಪಶುಪಾಲನಾ ಇಲಾಖೆಯ ಅಪರ ನಿರ್ದೇಶಕ ಡಾ. ಪ್ರಸಾದಮೂರ್ತಿ, ಜಂಟಿನಿರ್ದೇಶಕ ಡಾ. ಶ್ರೀಧರ್‌ಮೂರ್ತಿ, ಕೆ.ವಿ.ಸಿ. ಅಧ್ಯಕ್ಷರಾದ ಡಾ. ಶಂಕರ್, ಡಾ. ಸಿದ್ದರಾಮು, ಪಶುವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್, ಡಾ. ನಾಗರಾಜ್ ಪತ್ನಿ ಡಾ. ಜಯಮಾಲ, ಪುತ್ರಿ ಪ್ರಾರ್ಥನಾ, ಪಶುವೈದ್ಯರ ಸಂಘದ ಪದಾಧಿಕಾರಿಗಳು ಹಾಜರಿದ್ದರು.