
ಮೈಸೂರು: ‘ಬಿಪಿಎಲ್ ಇರ್ಲಿ, ಎಪಿಎಲ್ ಆದರೂ ಇರ್ಲಿ, ನಿಮ್ಮ ಖಾತೆಗೆ ಹಣ ಹಾಕ್ತಿವಿ’ ಎಂದು ಚುನಾವಣೆ ಪೂರ್ವದಲ್ಲಿ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಈಗ ಲಕ್ಷಾಂತರ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯನ್ನು ಬಿಪಿಎಲ್ ನೆಪ ಒಡ್ಡಿ ಸ್ಥಗಿತಗೊಳಿಸಿ, ಬಹುದೊಡ್ಡ ಸರ್ಜಿಕಲ್ ಸೈಕ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ ಎಂದು ಬಿಜೆಪಿ ಮೈಸೂರು ನಗರ ಮಾಜಿ ಉಪಾಧ್ಯಕ್ಷೆ ಡಾ. ಹೇಮಾನಂದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೃಹ ಲಕ್ಷ್ಮೀ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ 5,000 ಕೋಟಿ ರೂ. ಹಣವನ್ನು ನೀಡದೆ, ಲಕ್ಷಾಂತರ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ,
ಸರ್ಕಾರ ಈಗ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ, ತನಿಖೆ ನೆಪದಲ್ಲಿ ಯೋಜನೆಯನ್ನು ಕಡಿತಗೊಳಿಸಲು ಹೊರಟಿದೆ. 1.48 ಲಕ್ಷ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂಬ ಕಾರಣ ನೀಡಿ, ನೈಜ ಫಲಾನುಭವಿಗಳನ್ನೇ ಯೋಜನೆಯಿಂದ ಕೈಬಿಡುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ.
ಮಾಜಿ ಸಚಿವೆ ಲಕ್ಷಿ÷್ಮ ಹೆಬ್ಬಾಳ್ಕರ್ ಆರಂಭದಲ್ಲಿ ‘ಆಗಸ್ಟ್ವರೆಗೆ ಎಲ್ಲಾ ಕಂತು ಪಾವತಿಯಾಗಿದೆ’ ಎಂದು ತಪ್ಪು ಮಾಹಿತಿ ನೀಡಿ, ನಂತರ ಎರಡು ಕಂತು ಬಾಕಿ ಇದೆ ಎಂದು ಒಪ್ಪಿಕೊಂಡಿದ್ದರು. 1.26 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಅಂದರೆ ಎರಡು ತಿಂಗಳಿಗೆ 5,000 ಕೋಟಿ ರೂ.ಆಗುತ್ತದೆ. ಈ ಹಣ ಎಲ್ಲಿ ಹೋಯಿತು ಎಂದು ಸರ್ಕಾರ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.