
ಮೈಸೂರು: ಮಕ್ಕಳು ಹೆತ್ತವರ ಮಾತನ್ನು ಕೇಳಬೇಕು. ಯಾವಾಗಲೂ ಹಿರಿಯರ ಮಾರ್ಗದರ್ಶನದಲ್ಲಿಯೇ ಜೀವನ ನಿರ್ವಹಣೆ ಮಾಡಬೇಕು ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.
ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠವು ಮೈಸೂರಿನ ಅಗ್ರಹಾರದ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಅವರು ಭಾಗವತ ಸಂದೇಶ ನೀಡಿದರು.
ಗೋಕುಲದಲ್ಲಿ ಬೆಳೆಯುತ್ತಿದ್ದ ಶ್ರೀ ಕೃಷ್ಣ, ಎಲ್ಲರ ಮನೆಯಲ್ಲಿ ಮೊಸರು, ಬೆಣ್ಣೆ ಕದಿಯುತ್ತಿದ್ದ. ಯಾವ ವಸ್ತು ಅತ್ಯಂತ ಶ್ರೇಷ್ಠವೋ ಅದು ಭಗವಂತನಿಗೆ ಅರ್ಪಣೆ ಆಗಬೇಕು ಎಂಬ ತಾತ್ಪರ್ಯ ಇಲ್ಲಿ ಅಡಗಿದೆ. ಕೃಷ್ಣ ಬರುತ್ತಾನೆ ಎಂದೇ ಕೆಲವರು ಮೊಸರು, ಬೆಣ್ಣೆಯನ್ನು ಇಡುತ್ತಲೇ ಇರಲಿಲ್ಲ. ಅಂಥವರ ಮನೆಯ ಮಕ್ಕಳನ್ನು ಚಿವುಟಿ ಹೋಗುತ್ತಿದ್ದ. ದೇವರ ನೈವೇದ್ಯಕ್ಕೆ ಸುವಸ್ತುಗಳನ್ನು ಸಮರ್ಪಣೆ ಮಾಡದಿದ್ದರೆ, ನಿಮ್ಮ ಮನೆಯಲ್ಲಿ ಗೋಳು ತಪ್ಪಿದ್ದಲ್ಲ ಎಂಬ ಸಂದೇಶ ನೀಡಿದ ಎಂದು ಅವರು ದಶಮ ಸ್ಕಂದದಲ್ಲಿ ಬರುವ ಬಾಲ ಕೃಷ್ಣನ ಕಥೆಯನ್ನು ನಿರೂಪಿಸಿದರು.
ಸಾಕ್ಷಾತ್ ಭಗವಂತನೇ ಆಗಿದ್ದರೂ ತಾಯಿ ಯಶೋಧೆಯಿಂದ ಪೆಟ್ಟು ತಿಂದ. ಆಕೆಯು ಒರಳಿಗೆ ಕಟ್ಟಿ ಹಾಕಿದರೂ ಸುಮ್ಮನಿದ್ದ. ಮಕ್ಕಳಿಗೆ ಹಿರಿಯರು ದಂಡನೆ ಮಾಡಬೇಕು. ಅದನ್ನು ಎಳೆಯರು ಒಪ್ಪಿಕೊಳ್ಳಬೇಕು ಎಂಬ ಸಂದೇಶ ಇಲ್ಲಿ ಅಡಕವಾಗಿದೆ. ಮಣ್ಣು ತಿಂದ ಎಂದು ತಾಯಿ ಏಟು ಕೊಟ್ಟಳು. ಇಡೀ ಬ್ರಹ್ಮಾಂಡವೇ ನನ್ನ ಒಳಗೆ ಇದೆ ಎಂದು ಆಕೆಗೆ ದರ್ಶನ ಮಾಡಿಸಿದ.
ಚಿಕ್ಕವರು ಮತ್ತು ದೊಡ್ಡವರು ಹೇಗೆ ಇರಬೇಕು, ನಮ್ಮ ಜೀವನದ ಉದ್ದೇಶ ಯಾವ ರೀತಿ ಇರಬೇಕು ಎಂದು ಭಾಗವತ ಸಂದೇಶ ನೀಡಿದೆ. ಕೃಷ್ಣನ ಕಥೆ ಕೇವಲ ದ್ವಾಪರ ಯುಗಕ್ಕೆ ಮಾತ್ರ ಸೀಮಿತವಲ್ಲ, ಇಂದಿನ ನಮ್ಮೆಲ್ಲರ ಜೀವನ ಪಾವನವಾಗಲೂ ಪ್ರೇರಕವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಮುಂಜಾನೆ ಶ್ರೀಗಳಿಗೆ ಪಾದಪೂಜೆ, ಮುದ್ರಾಧಾರಣೆ, ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು. ಪಂಡಿತ ಬಾದರಾಯಣಾಚಾರ್ಯ- ಭಾಗ್ಯಾ ದಂಪತಿಗಳ ನೇತೃತ್ವದಲ್ಲಿ ನೂರಾರು ಭಕ್ತರು ಪತ್ನೀ ಸಹಿತರಾಗಿ ಶ್ರೀ ಧನ್ವಂತರಿ ಹೋಮ ಮಾಡಿದರು. ಪೂರ್ಣಾಹುತಿ ಸಂದರ್ಭದಲ್ಲಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಮಹಾ ಮಂಗಳಾರತಿ ಸಮರ್ಪಣೆ ಮಾಡಿದರು.
ಬೆಂಗಳೂರಿನ ಶ್ರೀವಾರಿ ಫೌಂಡೇಷನ್ನ ವೆಂಕಟೇಶಮೂರ್ತಿ ಮತ್ತು ತಂಡದವರಿAದ 2 ತಾಸುಗಳ ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿAದ ನೆರವೇರಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ಪಂಡಿತರಾದ ಗುತ್ತಲ ರಂಗಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಅನಿರುದ್ಧಾಚಾರ್ಯ ಇತರರು ಹಾಜರಿದ್ದರು. ಅಧಿಕಮಾಸದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಶ್ರೀಗಳು ಗೌರವಿಸಿದರು.