
ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಮಸ್ಯೆಗಳನ್ನು ಪರಿಹರಿಸಲು ಆಯೋಗ ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ.ಎಲ್ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ಹಾಗೂ ಅಹವಾಲು ಸ್ವೀಕೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಿಂದ 150 ಪ್ರಕರಣಗಳು ಆಯೋಗದಲ್ಲಿ ದಾಖಲಾಗಿದ್ದು, 48 ಪ್ರಕರಣಗಳು ಕೋರ್ಟ್ನಲ್ಲಿ ನಡೆಯುತ್ತಿವೆ. ಪ್ರಕರಣಗಳು ದಾಖಲಾಗಿರುವುದರಿಂದ ಇಂದು ಜಿಲ್ಲೆಯ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಅಹವಾಲು ಸ್ವೀಕರಿಸುವ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಇಂದು ಮೈಸೂರು ಜಿಲ್ಲೆಯಲ್ಲಿ 134 ಪೋಕ್ಸೋ ಪ್ರಕರಣಗಳು ಮೈಸೂರು ಭಾಗದಲ್ಲಿ ದಾಖಲಾಗಿವೆ. ಬಡಗ ಜಂಗಮ ಮತ್ತು ಬೇಡ ಜಂಗಮ ಜಾತಿ ಪ್ರಮಾಣ ಪತ್ರದ ಬಗ್ಗೆ ಆಯೋಗಕ್ಕೆ ದೂರುಗಳು ಬಂದಿದ್ದು, ಈ ಬಗ್ಗೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಾರ್ವಜನಿಕರ ಅಹವಾಲುಗಳು: ಮುಕ್ತ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿದ್ದು ನಿಯಮಾನುಸಾರ ಮಾಡಿಲ್ಲ, ಮಹಾನಗರ ಪಾಲಿಕೆಯಲ್ಲಿ 24.10% ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ಬಳಕೆ ಸಮರ್ಪಕವಾಗಿ ಆಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಸ್ಮಶಾನಗಳನ್ನು ಮೀಸಲಿಡಬೇಕು. ಜಾತಿ ವ್ಯವಸ್ಥೆ ಇಂದಿಗೂ ಸಮಾಜದಲ್ಲಿ ತಾಂಡವಾಡುತ್ತಿದೆ ತಾರತಮ್ಯ ಎಲ್ಲಾ ಕಡೆ ಇದೆ ಇದು ನಿಲ್ಲಬೇಕು. ಹುಣಸೂರಿನ ಅಂಬೇಡ್ಕರ್ ನಗರದ ನಿವಾಸಿಗಳಿಗೆ ಸ್ಮಶಾನ ವ್ಯವಸ್ಥೆ ಇಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಸರ್ಕಾರದಿಂದ ದಲಿತರಿಗೆ ಭೂಮಿ ಮಂಜೂರಾಗಿದ್ದರೂ ಅವರುಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಆಗಿರುವುದಿಲ್ಲ ಎಂದು ಮನವಿಗಳನ್ನು ಆಯೋಗಕ್ಕೆ ಸಲ್ಲಿಸಲಾಯಿತು.
ಆದಿವಾಸಿ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ನೀಡಬೇಕು. ಆಶ್ರಮ ಶಾಲೆಗಳಿಗೆ ಶಿಕ್ಷಕರ ಕೊರತೆ ಇದ್ದು, ಶಿಕ್ಷಕರ ನೇಮಕಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರು ಸಿಂಗಲ್ ವಿಂಡೋ ಪದ್ಧತಿಯಲ್ಲಿ ಏIಆಃ ಯಿಂದ ಭೂಮಿ ನೀಡಬೇಕು. 130 ಉದ್ದಿಮೆದಾರರು ಎಂಟು ವರ್ಷಗಳ ಹಿಂದೆ ಹಣ ಪಾವತಿಯನ್ನು ಮಾಡಿದ್ದರು ಭೂಮಿ ನೀಡಿಲ್ಲ. ಕೆಲವರು ಅಕ್ರಮವಾಗಿ ಜಾತಿ ಪ್ರಮಾಣ ಪತ್ರವನ್ನು ಪಡೆದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ, ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್‌ನ ಸದಸ್ಯ ಸಿ. ಎನ್ ಮಂಜೇಗೌಡ, ಎಸ್ಸಿ/ಎಸ್ಟಿ ಆಯೋಗದ ಸದ್ಯರಾದ ದಿವಾಕರ್, ಗೀತಾ ತಾಮೋಷಿ, ಎಂ ತುಂಬಯ್ಯ, ಕಾರ್ಯದರ್ಶಿ ಡಾ. ಹೆಚ್ ಎನ್ ಶಿವರಾಮ್, ಜಿಲ್ಲಾಧಿಕಾರಿ ಜಿ. ಲಕ್ಷಿ÷್ಮÃಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ನೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.