
ಮೈಸೂರು: ಯೋಗವು ಭಾರತದ ಪುರಾತನ ಪರಂಪರೆಯಾಗಿದ್ದು, ಭಾರತದ ಆರು ದರ್ಶನಗಳಲ್ಲಿ ಯೋಗವು ಒಂದು ಮಹತ್ವದ ದರ್ಶನವಾಗಿದೆ. ಇದು ಕೇವಲ ಒಂದು ವ್ಯಾಯಾಮ ಪದ್ಧತಿಯಷ್ಟೇ ಅಲ್ಲ, ಬದಲಿಗೆ ಸಂಪೂರ್ಣವಾಗಿ ಇಡೀ ಬದುಕನ್ನು ತೃಪ್ತಿದಾಯಕವಾಗಿ ಹೇಗೆ ನಡೆಸಬೇಕು ಎಂಬುದನ್ನು ಕಲಿಸಿಕೊಡುವ ತತ್ವಶಾಸ್ತ್ರವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಭಾನುವಾರ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು, ಆಯುಷ್ ಇಲಾಖೆ, ಮೈಸೂರು, ಮೈಸೂರು ಅರಮನೆ ಮಂಡಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಯೋಗ ಫೆಡರೇಷನ್ ಆಫ್ ಮೈಸೂರು ಮತ್ತು ವಿವಿಧ ಯೋಗನಿರತ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆರೋಗ್ಯಕರ ವೃ ದ್ದಾಪ್ಯಾಕ್ಕಾಗಿ ಯೋಗ ಎಂಬ ಘೋಷ ವಾಕ್ಯಗೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗವನ್ನು ಆಧುನಿಕ ಯುಗದಲ್ಲಿ ನಾವು ಅದನ್ನು ಹೇಗೆ ಮುಂದುವರಿಸುತ್ತಿದ್ದೇವೆ ಎಂಬುದರ ಹಿಂದೆ ಮೈಸೂರಿನ ಬಹಳ ದೊಡ್ಡ ಪ್ರಭಾವ ಹಾಗೂ ಕೊಡುಗೆ ಇದೆ ಎಂದು ಹೇಳಿದರು.
ಯೋಗಾಭ್ಯಾಸವು ಕೇವಲ ದೈಹಿಕ ಚಲನೆ ಮಾತ್ರವಲ್ಲದೆ, ಸಹಿಷ್ಣುತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂದು ಜಗತ್ತಿನಾದ್ಯಂತ ಪ್ರಖ್ಯಾತಿಯಾಗಿರುವ ಸೂರ್ಯ ನಮಸ್ಕಾರ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಯೋಗ ವಿನ್ಯಾಸ ಪದ್ಧತಿಗಳು ಟಿ. ಕೃಷ್ಣಮಾಚಾರ್ಯರ ಮೂಲಕ ಮೈಸೂರಿನಿಂದಲೇ ಪ್ರಾರಂಭವಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಾರತದ ಯೋಗಕ್ಕೆ ವಿಶ್ವಸಂಸ್ಥೆಯಲ್ಲಿ ಮನ್ನಣೆ ದೊರಕಿಸಿಕೊಡುವಲ್ಲಿ ಪ್ರಧಾನಮಂತ್ರಿಯವರ ಶ್ರಮ ದೊಡ್ಡದಾಗಿದೆ. ಇಂದು ಇಡೀ ವಿಶ್ವವೇ ಉತ್ತಮ ಜೀವನಕ್ಕಾಗಿ ಯೋಗ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಮೈಸೂರು ಇಂದು ಆಧುನಿಕ ಯೋಗದ ಕೇಂದ್ರವಾಗಿ ಹೊರಹೊಮ್ಮಿದೆ. ಯೋಗಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡುವ ಮೂಲಕ ಒಂದು ಆರೋಗ್ಯಕರ ಹಾಗೂ ಆದರ್ಶ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಶಾಸಕ ಟಿ.ಎಸ್ ಶ್ರೀವತ್ಸ ಮಾತನಾಡಿ, ಈ ಬಾರಿಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರಿನ ಸುಮಾರು 180 ವಿವಿಧ ಜಾಗಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಯೋಗ ಫೆಡರೇಶನ್ ನೇತೃತ್ವದಲ್ಲಿ ಕಳೆದ ಎರಡು-ಮೂರು ತಿಂಗಳುಗಳಿಂದ ನಡೆದ ನಿರಂತರ ಸಿದ್ಧತೆಯ ಫಲವಾಗಿ ಇಂದು 1,200ಕ್ಕೂ ಹೆಚ್ಚು ಯೋಗ ಶಿಕ್ಷಕರ ಈ ಬೃಹತ್ ಕಾರ್ಯಕ್ರಮವನ್ನು ಮುನ್ನಡೆಸುತ್ತ ಮೈಸೂರಿನ ವಿವಿಧ ಭಾಗಗಳಲ್ಲಿ ಒಟ್ಟಾರೆಯಾಗಿ 1 ಲಕ್ಷಕ್ಕೂ ಹೆಚ್ಚು ಜನ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಈ ಬಾರಿಯ ಕಾರ್ಯಕ್ರಮಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ.ಸಿ ಮಾತನಾಡಿ, ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದು ಮನಸ್ಸು, ಶರೀರ ಮತ್ತು ಆತ್ಮವನ್ನು ಬೆಸೆಯುವ ಅದ್ಭುತ ಕಲೆ ಹಾಗೂ ವಿಜ್ಞಾನದ ಒಂದು ಭಾಗವಾಗಿದೆ.
ವಯಸ್ಸಾಗುವುದು ನಿಸರ್ಗದ ನಿಯಮವಾದರೂ, ವೃದ್ಧಾಪ್ಯದಲ್ಲೂ ನವತಾರುಣ್ಯದ ಉತ್ಸಾಹ ಹಾಗೂ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗವು ಸಂಜೀವಿನಿಯಾಗಿದೆ ಎಂಬುದು ಈ ಘೋಷವಾಕ್ಯವಾಗಿದೆ. ಇಂದಿನ ಜಂಜಾಟದ ಹಾಗೂ ಬಿಡುವಿಲ್ಲದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿ ಮತ್ತು ಸದೃಢ ಆರೋಗ್ಯವನ್ನು ಕರುಣಿಸುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ, ನಗರ ಪೆÇಲೀಸ್ ಆಯುಕ್ತಾರಾದ ಸೀಮಾ ಲಾಕರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ, ಅರಮನೆಯ ಮಂಡಳಿಯ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.