
ಮೈಸೂರು: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ , ಸಾಂಗಡಿಗರು ಹಾಗೂ ಅಪರ್ಯಾಪ್ತ ತಂಡಗಳ ಸಹಯೋಗದಲ್ಲಿಮೆಹಫಿಲ್ ಎ ಸೂಫಿಯಾನಾ’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ಜೂನ್ 28ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ಜೆಎಲ್ಬಿ ರಸ್ತೆಯ ಹಾರ್ಡ್ವಿಕ್ ಶಾಲಾ ಆವರಣದಲ್ಲಿರುವ ಐಐಇಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಸೂಫಿ ಸಂಗೀತ ಮತ್ತು ರಂಗಸAಗೀತದ ಅಪರೂಪದ ಸಂಗಮವಾಗಿರುವ ಈ ಕಾರ್ಯಕ್ರಮದಲ್ಲಿ ಕಬೀರ, ಅಮೀರ್ ಖುಸ್ರೊ, ರೂಮಿ, ಶರೀಫ ಹಾಗೂ ದಾಸರ ಪದಗಳ ಆಧಾರದ ಮೇಲೆ ರೂಪುಗೊಂಡ ಹಾಡುಗಳ ಜೊತೆಗೆ ರಂಗಭೀಷ್ಮ ಬಿ.ವಿ. ಕಾರಂತರವರು ಸಂಯೋಜಿಸಿರುವ ಆಯ್ದ ರಂಗಗೀತೆಗಳನ್ನೂ ಪ್ರಸ್ತುತಪಡಿಸಲಾಗುತ್ತದೆ.
ಇದು ಕೇವಲ ಹಾಡುಗಳ ಕಾರ್ಯಕ್ರಮವಾಗಿರದೆ, ಹಾಡುಗಳ ಹಿನ್ನೆಲೆ, ಅವುಗಳ ತಾತ್ವಿಕ ಅರ್ಥ, ರಚನೆಯ ಸಂದರ್ಭ ಹಾಗೂ ಸ್ವಾರಸ್ಯಕರ ಸಂಗತಿಗಳನ್ನು ಪರಿಚಯಿಸುತ್ತಾ ಸಾಗುವ ವಿಶಿಷ್ಟ ಮೆಹಫಿಲ್ ಆಗಿದೆ. ಪರ್ಶಿಯನ್, ಬ್ರಜ್, ಅರೇಬಿಕ್, ಉರ್ದು, ಹಿಂದಿ, ಪಂಜಾಬಿ ಸೇರಿದಂತೆ ವಿವಿಧ ಭಾಷೆಗಳ ಹಾಡುಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿವೆ.
ನಮ್ಮ ತತ್ವಪದಗಳ ಪರಂಪರೆಯನ್ನು ನೆನಪಿಸುವ ಈ ಹಾಡುಗಳು ಆತ್ಮಾವಲೋಕನ, ಆಧ್ಯಾತ್ಮಿಕತೆ ಹಾಗೂ ಮಾನವೀಯ ಮೌಲ್ಯಗಳತ್ತ ಪ್ರೇಕ್ಷಕರನ್ನು ಕರೆದೊಯ್ಯುತ್ತವೆ. ಸಂಗೀತದ ಲಯದಲ್ಲಿ ಬದುಕಿನ ಜಂಜಾಟಗಳನ್ನು ಮರೆತು ಕಲಾತ್ಮಕ ಅನುಭವದಲ್ಲಿ ಮುಳುಗುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸಲಿದೆ.
ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿರುವ ಸಾಂಗಡಿಗರು ತಂಡವು ಭಾಷೆ, ಪ್ರಕಾರ ಅಥವಾ ಸಂಗೀತದ ಯಾವುದೇ ಒಂದು ಚೌಕಟ್ಟಿಗೆ ಸೀಮಿತವಾಗದೆ ವಿವಿಧ ಸಂಗೀತ ಪ್ರಕಾರಗಳನ್ನು ಅನ್ವೇಷಿಸುವ ಗಾಯಕರ ಹಾಗೂ ರಂಗಕರ್ಮಿಗಳ ಸಮೂಹವಾಗಿದೆ. ನೀನಾಸಂನಲ್ಲಿ ತರಬೇತಿ ಪಡೆದ ನಿರ್ದೇಶಕರು, ನಟರು ಮತ್ತು ಸಕ್ರಿಯ ರಂಗಭೂಮಿ ಕಲಾವಿದರು ಈ ತಂಡದ ಭಾಗವಾಗಿದ್ದಾರೆ. ರಂಗಸAಗೀತ, ಜನಪದ, ವಚನ, ಸೂಫಿ ಹಾಗೂ ಹೋರಾಟದ ಹಾಡುಗಳ ಮೂಲಕ ಸಂಗೀತಾಸಕ್ತರ ಮನಸ್ಸನ್ನು ತಲುಪುವುದು ತಂಡದ ಆಶಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ನಂ 9686892255ನ್ನು ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.