
ಚಾಮರಾಜನಗರ, ಜೂ. 30: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಸಮಾನತೆಯ ಸಂದೇಶ ಸಾರಿದಂತೆ, 21ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಡಿ 33 ವರ್ಷಗಳ ಕಾಲ ನಿಷ್ಕಳಂಕ, ಜನಸ್ನೇಹಿ ಸೇವೆ ಸಲ್ಲಿಸಿದ ಸಹಾಯಕ ಉಪನಿರೀಕ್ಷಕ ಬಿ. ವಿಶ್ವ ಅವರು ಇಂದು ಪೊಲೀಸ್ ಇಲಾಖೆಯಿಂದ ವಯೋನಿವೃತ್ತಿ ಹೊಂದಿದರು.
ನಗರದಲ್ಲಿ ಹಿತೈಷಿಗಳ ಬಳಗದಿಂದ ವಿರಕ್ತಮಠದ ಆವರಣದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವು ಸರ್ವಧರ್ಮ ಸಮನ್ವಯತೆಯ ವೇದಿಕೆಯಾಯಿತು. ಅಧಿಕಾರ ಅವಧಿ ಮುಗಿದ ಮೇಲೂ ನೂರಾರು ಜನ ಸ್ವಯಂಪ್ರೇರಿತರಾಗಿ ಸೇರಿ ಶುಭಕೋರಿದ್ದು, ಜನಸ್ನೇಹಿ ಪೊಲೀಸ್‌ಗೆ ಸಂದ ಗೌರವಕ್ಕೆ ಸಾಕ್ಷಿಯಾಯಿತು. ಇದು ನಿಜಕ್ಕೂ ಖುಷಿಯ ಮತ್ತು ಹೆಮ್ಮೆಯ ವಿಷಯ ಎಂದು ನೆರೆದಿದ್ದವರು ಅಭಿಪ್ರಾಯಪಟ್ಟರು.
ಚಾಮರಾಜನಗರ ವಿರಕ್ತ ಮಠದ ಪೂಜ್ಯ ಶ್ರೀ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ “ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಶ್ರೀ ವಿಶ್ವ ಅವರು ಖಾಕಿ ಧರಿಸಿ ಕಾಯಕವನ್ನೇ ಪೂಜೆಯನ್ನಾಗಿ ಮಾಡಿದರು. ಜನಸ್ನೇಹಿ ಆಡಳಿತಕ್ಕೆ ಇವರೇ ಉದಾಹರಣೆ. ಇಂದು ಇಷ್ಟು ಜನ ಸೇರಿರುವುದೇ ಅವರ ಸೇವೆಗೆ ಸಿಕ್ಕ ಫಲ ಇವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಆಶೀರ್ವದಿಸಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ ರವರು ಮಾತನಾಡಿ 33 ವರ್ಷದ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಂವಿಧಾನವೇ ನನ್ನ ಧರ್ಮಗ್ರಂಥ ಎಂದು ನಂಬಿ, ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡ ಅಧಿಕಾರಿ. ಅಧಿಕಾರ ಮುಗಿದ ಮೇಲೂ ಜನ ಹೀಗೆ ಪ್ರೀತಿಯಿಂದ ಬೀಳ್ಕೊಡೋದು ಬಹಳ ಅಪರೂಪ. ಇವರು ನಮ್ಮ ಇಲಾಖೆಗೆ ಮಾದರಿ ಎಂದು ಶ್ಲಾಘಿಸಿದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡುತ್ತಾ”ರೈತ, ಕಾರ್ಮಿಕ, ಹೋರಾಟಗಾರ ಎಲ್ಲರಿಗೂ ನ್ಯಾಯ ಒದಗಿಸಿದರು. ಪೊಲೀಸ್ ಠಾಣೆ ಎಂದರೆ ಭಯ ಪಡುವ ಕಾಲದಲ್ಲಿ, ‘ನಮ್ಮ ವಿಶ್ವ ಸರ್ ಇದಾರೆ’ ಅಂತ ಧೈರ್ಯದಿಂದ ಬರುವಂತೆ ಮಾಡಿದರು. ಇದೇ ನಿಜವಾದ ಜನಸ್ನೇಹಿ ಪೊಲೀಸ್ ವ್ಯವಸ್ಥೆ. ಎಂದರು
ಚುಡಾ ಅಧ್ಯಕ್ಷರು ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ ಅಧಿಕಾರ ಇದ್ದಾಗ ವಿನಯ, ನಿವೃತ್ತಿಯಾದ ಮೇಲೂ ಜನರ ಪ್ರೀತಿ – ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ ಎಂದರು
ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷ ಮರುಸ್ವಾಮಿ “ಸರ್ವಧರ್ಮಗಳು ಸಾರುವುದು ಒಂದೇ – ಮಾನವೀಯತೆ. ಶ್ರೀ ವಿಶ್ವ ಅವರು ಎಲ್ಲ ಧರ್ಮದವರಿಗೂ ಒಂದೇ ನ್ಯಾಯ ಕೊಟ್ಟರು. ಠಾಣೆಗೆ ಬಂದ ಪ್ರತಿಯೊಬ್ಬರ ಕಣ್ಣೀರು ಒರೆಸಿದರು. ಇದು ನಿಜವಾದ ಸರ್ವಧರ್ಮ ಸಮನ್ವಯದ ಸೇವೆ.”ಎಂದು ಕುಶಿ ವ್ಯಕ್ತಪಡಿಸಿದರು
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಬಂಗಾರು ಮಾತನಾಡಿ”ಎಸ್‌ಪಿ, ಡಿವೈಎಸ್‌ಪಿ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಶ್ರೀ ವಿಶ್ವ ಅವರು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ಭಾಷ್ಯ ಬರೆದರು. ಮಾಧ್ಯಮದವರೊಂದಿಗೆ ಮುಕ್ತವಾಗಿ ಮಾತನಾಡಿ, ಸತ್ಯಾಂಶ ಜನರಿಗೆ ತಲುಪಿಸಿದರು. ಪೊಲೀಸ್-ಮಾಧ್ಯಮ-ಸಾರ್ವಜನಿಕರ ನಡುವೆ ಸೇತುವೆಯಾದರು. ಇಂತಹ ಅಧಿಕಾರಿಗಳು ಇಲಾಖೆಗೆ ಆಸ್ತಿ.”ಎಂದರು
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಎಎಸ್‌ಐ ಬಿ. ವಿಶ್ವ”ಖಾಕಿ ಬಟ್ಟೆ ತೊಟ್ಟಾಗಿನಿಂದಲೂ ಸಂವಿಧಾನವೇ ನನ್ನ ಧರ್ಮಗ್ರಂಥ, ಕಾಯಕವೇ ಕೈಲಾಸ ಎಂಬ ಬಸವಣ್ಣನ ತತ್ವದಂತೆ ಜನಸೇವೆಯೇ ನನ್ನ ಕಾಯಕ. ಇಂದು ಅಧಿಕಾರ ಮುಗಿದ ಮೇಲೂ ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ಇದೇ ನನ್ನ 33 ವರ್ಷದ ಸೇವೆಗೆ ಸಂದ ಅತಿ ದೊಡ್ಡ ಗೌರವ” ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಸ್ನೇಹರಾಜ್, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಗ್ಗೇಶ್. ರಾಮಸಮುದ್ರದ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್. ಜಿಲ್ಲಾ ವಕೀಲರ ಸಂಘದ ಪುಟ್ಟಸ್ವಾಮಿ, ಸಾಹಿತಿ ಮಂಜು ಕೋಡಿಉಗನೆ, ಪತ್ರಕರ್ತ ಶಿವಶಂಕರ್ ಚಿಂಟು. ಬಸವಣ್ಣ ರೈತ ಮುಖಂಡ ಬಸವಣ್ಣ ಎಸ್.ಡಿಪಿಐ ಅಬ್ರಹರ್ ಅಹಮದ್, ಸಿಎಂ ಕೃಷ್ಣಮೂರ್ತಿ, ನಮ್ಮನೆ ಪ್ರಶಾಂತ್, ಶ್ರೀನಿವಾಸ ಗೌಡ ಪನ್ಯಾದ ಉಂಡಿರಾಜು. ಪುಷ್ಪಲತಾ ಸುಬ್ರಮಣ್ಯ. ಸಂಗೀತ ಎಲೆಕ್ಟ್ರಾನಿಕ್ ಮಣಿ.
ಹಾಗು ಕನ್ನಡ ಪರ ಹೋರಾಟಗಾರರು,ರೈತ ಮುಖಂಡರು, ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು, ದಲಿತ ಸಂಘಟನೆಯ ಮುಖಂಡರು, ರಾಜಕೀಯ ಮುಖಂಡರುಗಳು, ಕುಟುಂಬ ವರ್ಗದವರು ಮತ್ತು ಸಾರ್ವಜನಿಕರು ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.