
ಮೈಸೂರು; ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದಲ್ಲಿರುವ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನಕ್ಕೆ ಎರಡು ಸಾವಿರ ರೂ ಟಿಕೆಟ್ ನಿಗದಿ ಮಾಡಿರುವುದನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಕರ್ನಾಟಕ ಸೇನಾಪಡೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಭಕ್ತಾಧಿಗಳೇ ನಿಮ್ಮಲ್ಲಿ ಎರಡು ಸಾವಿ ರೂ ಇದ್ದರೆ ಮಾತ್ರ ಚಾಮುಂಡಿಬೆಟ್ಟಕ್ಕೆ ಬನ್ನಿ,
ಇಲ್ಲವಾದರೆ ಮನೆಯಿಂದಲೇ ಚಾಮುಂಡೇಶ್ವರಿತಾಯಿಗೆ ಕೈ ಮುಗಿದು ಬಿಡಿ ಎಂದು ಚಾಮುಂಡಿ ಬೆಟ್ಟ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಣಕು ಪ್ರದರ್ಶನ ನಡೆಸಿದರು.
ಭಕ್ತ ಪರಾಕಾಷ್ಟೆಯ ಹೆಸರಲ್ಲಿ, ವಿಶೇಷ ದರ್ಶನದ ಹೆಸರಲ್ಲಿ, ರಾಜ್ಯ ಸರ್ಕಾರ 2000 ರೂಪಾಯಿಯನ್ನು ಲೂಟಿ ಮಾಡಲು ಹೊರಟಿದೆ. ವಿಶೇಷ ದರ್ಶನದಿಂದಾಗಿ ಸರ್ಕಾರ ಉಳಿದ ಭಕ್ತಾದಿಗಳನ್ನು ನಿರ್ಲಕ್ಷಿಸಿ ಕಡೆಗಣಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ, ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಅವುಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ, ದಿವಾಳಿಯಾಗಿ, ಈಗ ಈ ರೀತಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣು ಹಾಕಿ, ಭಕ್ತರಿಂದ ಹಣ ವಸೂಲಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದರು.
ಈ ವರ್ಷದಿಂದ ಚಾಮುಂಡಿ ಬೆಟ್ಟ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ದರ್ಶನದ 50 ರೂ ಹಾಗೂ 300 ರೂಗಳ ವಿಶೇಷ ದರ್ಶನಗಳ ಟಿಕೆಟ್ ಗಳನ್ನು ರದ್ದು ಮಾಡುತ್ತಿರುವುದು ಸರಿಯಲ್ಲ. ಜಗತ್ಪçಸಿದ್ಧ ಚಾಮುಂಡೇಶ್ವರಿ ಬೆಟ್ಟ ಮೈಸೂರು ಮಹಾರಾಜರ ಕೊಡುಗೆ ಹಾಗೂ ಆಸ್ತಿ. ಇದನ್ನು ಮಹಾರಾಜರು ಸ್ಥಾಪಿಸಿದ್ದು ಭಕ್ತಾದಿಗಳಿಗೆ ದೇವಿಯ ದರ್ಶನ ಉಚಿತವಾಗಿ ಸಿಗಲೆಂದು. ಆದರೆ ಈಗ ರಾಜ್ಯ ಸರ್ಕಾರ 2000 ರೂಪಾಯಿಗಳ ಟಿಕೆಟ್ ನೆಪದಲ್ಲಿ, ಬೆಟ್ಟದಲ್ಲಿ ವ್ಯಾಪಾರೀಕರಣ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಈ 2000 ರೂ. ವಿಶೇಷ ದರ್ಶನ ತಿರುಪತಿ ದೇವಸ್ಥಾನದಲ್ಲಿ ಇಲ್ಲ ಧರ್ಮಸ್ಥಳದಲ್ಲಿ ಇಲ್ಲ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಹ ಇರುವುದಿಲ್ಲ.
ಚಾಮುಂಡಿ ಬೆಟ್ಟ ಪ್ರಾಧಿಕಾರ ಹೇಳುವುದು 2000 ರೂ.ಗೆ ನಾವು ಕಿಟ್ ನೀಡುತ್ತೇವೆ ಎಂದು. ಆಷಾಢದಲ್ಲಿ ಜನರು ದೇವಿಯ ದರ್ಶನ ಮಾಡಲು ಬರುತ್ತಾರೆ ವಿನಃ ಯಾವುದೇ ಕಿಟ್ ಜನರಿಗೆ ಬೇಕಿಲ್ಲ. ಚಾಮುಂಡಿ ಬೆಟ್ಟ ಪ್ರಾಧಿಕಾರ ಮೊದಲು 2000 ರೂ ಟಿಕೆಟ್ ಪಡೆದು ಆಗಮಿಸುವ ಸುಮಾರು 100 ಭಕ್ತಾದಿಗಳಿಗೆ ಕಿಟ್ ನೀಡಿ, ಫೋಟೋ, ವಿಡಿಯೋ ತೆಗೆದುಕೊಂಡು, ತದನಂತರ ಒಬ್ಬರಿಗೂ ನೀಡುವುದಿಲ್ಲ. ಸಾವಿರಾರು ಕಿಟ್ ಗಳ ಲೆಕ್ಕ ನೀಡುತ್ತಾರೆ. ಇದರಿಂದ ಜನರ ಹಣ, ಬೆಟ್ಟದ ಅಧಿಕಾರಿಗಳಿಂದ ದುರುಪಯೋಗವಾಗುತ್ತದೆ. 2000 ರೂ ಟಿಕೆಟ್ ವಿಚಾರವಾಗಿ ಸ್ವತಹ ಮೈಸೂರು ಮಹಾರಾಜ ಹಾಗು ಸಂಸದರಾಗಿರುವ ಯದುವೀರ್ ಒಡೆಯರ್ ಹಾಗೂ ಪ್ರಮೋದಾದೇವಿ ಮಹಾರಾಣಿಯವರು ಸಹ ಇದು ಬೇಡ ಎಂದು ಖಂಡಿಸಿದ್ದಾರೆ. ಇದರ ಬದಲು ಕಳೆದ ವರ್ಷಗಳಂತೆ 50 ರೂ ಹಾಗೂ 300 ರೂ ದರ್ಶನದ ವ್ಯವಸ್ಥೆಯನ್ನು ಬೆಟ್ಟದ ಪ್ರಾಧಿಕಾರ ಮುಂದುವರಿಸಬೇಕೆAದು ಪ್ರತಿಭಟನಾಕಾರರು ಆಗ್ರಹಿಸಿದರು.
ಉಸ್ತುವಾರಿ ಸಚಿವರು ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಬಿಸ್ಕೆಟ್, ಕುಡಿಯುವ ನೀರು, ಹಾಲುಮಜ್ಜಿಗೆ ನೀಡುತ್ತೇವೆ ಎಂದು ಹೇಳಿರುವುದು ಸುಳ್ಳು ಭರವಸೆಯಾಗಿದೆ. ಇದ್ಯಾವುದೂ ಅಂದಿನ ದಿನ ಕಾರ್ಯಗತಕ್ಕೆ ಬರುವುದೇ ಇಲ್ಲ. ಈ ಹೆಸರಿನಲ್ಲಿ ಬೆಟ್ಟದ ಪ್ರಾಧಿಕಾರ,ಸರ್ಕಾರ ಹಣ ಲೂಟಿ ಮಾಡುವ ಸಂಚು. ಇದರ ಬದಲಾಗಿ ಮೆಟ್ಟಿಲು ಹತ್ತಿ ದಣಿದು ಬರುವ ಭಕ್ತಾದಿಗಳಿಗೆ ನೇರದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಿ ಹಾಗೂ ಜೊತೆಗೆ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಸಮರ್ಪಕ ಶೌಚಾಲಯದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಈ ಬಾರಿಯಾದರೂ ಕಲ್ಪಿಸಲೇಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ , ಮುಖಂಡರಾದ ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಗಿರೀಶ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ಸೋಮೇಗೌಡ, ಶಿವಲಿಂಗಯ್ಯ, ಹೊನ್ನೇಗೌಡ, ಮಂಜುಳಾ, ಶೋಭಾ ರಾಣಿಗೌಡ, ವಿಜಯೇಂದ್ರ, ನಾಗೇಂದ್ರ, ಕೃಷ್ಣೇಗೌಡ, ಶ್ರೀನಿವಾಸ , ಸುಜಾತಾ, ಜ್ಯೋತಿ, ತಾಯೂರು ಗಣೇಶ್, ಹನುಮಂತಯ್ಯ, ಗೀತಾ ಗೌಡ , ಬಸವರಾಜು, ಪದ್ಮ, ತ್ಯಾಗರಾಜ್, ಎಳನೀರು ರಾಮಣ್ಣ,ದರ್ಶನ ಗೌಡ, ಪ್ರದೀಪ್, ಕುಮಾರ್, ನಾರಾಯಣ ಗೌಡ, ಶಿವರಾಂ , ವಿಘ್ನೇಶ್, ಹನುಮಂತೇಗೌಡ , ಚಂದ್ರಶೇಖರ್, ಪರಿಸರ ಚಂದ್ರು, ಗಣೇಶ್ ಪ್ರಸಾದ್, ವಿಷ್ಣು ಮುಂತಾದವರು ಹಾಜರಿದ್ದರು.