
ಪಿರಿಯಾಪಟ್ಟಣ: ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸರ್ಕಾರ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯಲ್ಲಿ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ಬಿ.ಎನ್.ನಿಶ್ಚಿತ್ ತಿಳಿಸಿದರು.
ತಾಲ್ಲೂಕಿನ ಬೆಟ್ಟದ ತುಂಗಾ ಮೇಗಳ ಕೊಪ್ಪಲು ಹಾಗೂ ಮೇಲೂರು ಗ್ರಾಮಗಳ್ಳಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ದೊರೆಕೆರೆ ಗ್ರಾಮದಲ್ಲಿ ಮಾತನಾಡಿದ ಅವರು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಿ ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜ್ ದರದ ಮಿತಿಗೊಳಿಸಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಮತ್ತು ಅವರ ಕುಟುಂಬದವರು ವಾರ್ಷಿಕವಾಗಿ ಗರಿಷ್ಠ 5 ಲಕ್ಷ ದ ವರೆಗೆ ಈ ಯೋಜನೆಯಡಿ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಹಾಗಾಗಿ 75 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರಬೇಕು ಎಂಬ ನಿಯಮವಿದೆ. ಈ ಯೋಜನೆಯಡಿ ಹೊಸ ನೋಂದಣಿಗೆ ಸರ್ಕಾರ ಆದೇಶ ಕೆಲವು ಷರತ್ತುಗಳನ್ನು ವಿಧಿಸಿದೆ ಎಂದರು.
ಬೆಟ್ಟದ ತುಂಗಾ ಮೇಗಳ ಕೊಪ್ಪಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಿಕ್ಕೇಗೌಡ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಪಾಲಿನ ಎರಡು ಕಣ್ಣುಗಳಿದ್ದಂತೆ, ಇಂದು ಹೈನುಗಾರಿಕೆ ವ್ಯವಸಾಯವನ್ನು ಮೀರಿ ಬೆಳೆದಿರುವ ಕಾರಣಕ್ಕೆ ರೈತರು ಆರ್ಥಿಕವಾಗಿ ಸಬಲತೆ ಹೊಂದಲು ಸಾಧ್ಯವಾಗಿದೆ ಹಾಗಾಗಿ ಸರ್ಕಾರ ಹೈನುಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಟ್ಟದ ತುಂಗಾ ಮೇಗಳ ಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಕ ಬಲರಾಮ್, ಉಪಾಧ್ಯಕ್ಷ ಹೊಟ್ಟಪ್ಪ ಸ್ವಾಮಿಗೌಡ, ನಿರ್ದೆಶಕರಾದ ಯಶೋಧರ , ಅಪ್ಪಾಜಿಗೌಡ, ಹೊನ್ನೇಗೌಡ, ಜಯರಾಂ, ಸಾವಿತ್ರಮ್ಮ, ಸರೋಜಾ, ಬಸವರಾಜು, ಸಿದ್ದರಾಮೇಗೌಡ, ಮುಖಂಡ ಮಲ್ಲಿಕಾರ್ಜುನ್, ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಸುವರ್ಣಮ್ಮ, ಮುಖ್ಯ ಕಾರ್ಯನಿರ್ವಾಹಕ ಶಿವಮೂರ್ತಿ, ಉಪಾಧ್ಯಕ್ಷ ಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.