
ಮೈಸೂರು; ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಗಮನ ನೀಡುತ್ತದೆ ಎಂದು ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಿಟ್ಟೆಯ ಸಹಪ್ರಾಧ್ಯಾಪಕ ಡಾ. ಚಂದ್ರಜಿತ್ ಮೋಹನ್ ಹೇಳಿದರು.
ಮೈಸೂರಿನ ಸರಸ್ವತಿಪುರಂ ನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಫಲಿತಾಂಶ ಆಧಾರಿತ ಶಿಕ್ಷಣ ಮತ್ತು ಶೈಕ್ಷಣಿಕ ಪರಿಕರಗಳನ್ನು ಕಾರ್ಯಗತಗೊಳಿಸುವುದು’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಫಲಿತಾಂಶ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ ಎಂದು ಹೇಳಿದರು.
ಫಲಿತಾಂಶ ಆಧಾರಿತ ಶಿಕ್ಷಣವು ವರ್ತಮಾನಕ್ಕೆ ಅನಿವಾರ್ಯವಾಗಿದ್ದು, ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಬೆಳವಣಿಗೆಯನ್ನು ಕೇವಲ ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬಾರದು . ಅಧ್ಯಾಪಕರು ಕೃತಕ ಬುದ್ಧಿಮತ್ತೆ ಉಪಕರಣಗಳ ಕುರುಡು ಗುಲಾಮರಾಗಬಾರದೆಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ತಕ್ಕಂತೆ ಶಿಕ್ಷಕರು ಸಹ ಶೈಕ್ಷಣಿಕ ಪರಿಕರಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ರೇಚಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಕಾರ್ತಿಕ್ ಕುದ್ರೋಳಿ ಮತ್ತು ಡಾ. ಶೀತಲ್ ಕುಮಾರ್, ಐ.ಕ್ಯೂ.ಎ.ಸಿ (Iಕಿಂಅ) ಸಂಯೋಜಕ ಮಲ್ಲೇಶ ಆರ್. ಹಾಗೂ ಕಾರ್ಯಕ್ರಮದ ಸಂಯೋಜಕ ಮಹದೇವಪ್ರಸಾದ್ ಜಿ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಚೈತ್ರ ಎಸ್, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಸಿಂಣ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸೌಮ್ಯ ಬಿ, ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಸುಮತಿ ಪಿ. ಉಪಸ್ಥಿತರಿದ್ದರು. ಕಾಲೇಜಿನ ಅಧ್ಯಾಪಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನೆ ನಂತರ 3 ತಾಂತ್ರಿಕ ಗೋಷ್ಠಿಗಳು ನಡೆದವು: ಮೊದಲ ತಾಂತ್ರಿಕ ಗೋಷ್ಠಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ತಿಕ್ ಕುದ್ರೋಳಿ ಅವರು ‘ಫಲಿತಾಂಶ ಆಧಾರಿತ ಶಿಕ್ಷಣ’ ವಿಷಯ ಕುರಿತು ಉಪನ್ಯಾಸ ನೀಡಿದರು. ಎರಡನೇ ತಾಂತ್ರಿಕ ಗೋಷ್ಠಿಯನ್ನು ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಪ್ರಾಧ್ಯಾಪಕ ಡಾ. ಚಂದ್ರಜಿತ್ ಮೋಹನ್ ಅವರು ‘ಬೋಧನೆ ಮತ್ತು ಕಲಿಕೆಗಾಗಿ ಸಾಫ್ಟ್ವೇರ್ ಉಪಕರಣಗಳ ವರ್ಧನೆ’ ಎಂಬ ವಿಷಯದ ಕುರಿತು ಮಾತನಾಡಿದರು. ಕೊನೆಯ ತಾಂತ್ರಿಕ ಗೋಷ್ಠಿಯನ್ನು ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶೀತಲ್ ಕುಮಾರ್ ಅವರು “ಕಲಿಕಾ ನಿರ್ವಹಣಾ ವ್ಯವಸ್ಥೆ (ಐಒS): ಮೂಡಲ್ ಸಾಫ್ಟ್ವೇರ್” ಎಂಬ ವಿಷಯದ ಕುರಿತು ಮಂಡಿಸಿದರು. ತಾಂತ್ರಿಕ ಗೋಷ್ಠಿಗಳ ನಂತರ ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಯಿತು.