
ಮೈಸೂರು; ಅಣಬೆ ಬೇಸಾಯವು ಗ್ರಾಮೀಣ ಯುವಕರು ಮತ್ತು ಮಹಿಳೆಯರಿಗೆ ಉತ್ತಮ ಆದಾಯದ ಮಾರ್ಗವಾಗಿದೆ ಎಂದು ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಹೇಳಿದರು.
ಮೈಸೂರಿನ ಹಾರ್ಟ್ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜದ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಡಿಮೆ ಬಂಡವಾಳ, ಕಡಿಮೆ ಸ್ಥಳ ಮತ್ತು ಕಡಿಮೆ ಅವಧಿಯಲ್ಲಿ ಉತ್ತಮ ಆದಾಯಗಳಿಸಬಹುದಾದ ಅಣಬೆ ಬೇಸಾಯವನ್ನು ಯುವಕರು ಹಾಗೂ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಣಬೆ ಬೇಸಾಯದ ಕುರಿತು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಯಿತು. ಸೈದ್ಧಾಂತಿಕ ಅಧಿವೇಶನದಲ್ಲಿ ಅಣಬೆಯ ಮಹತ್ವ, ಸ್ಪಾನ್ ಆಯ್ಕೆ, ಹಾಸು ತಯಾರಿಕೆ, ರೋಗ ನಿರ್ವಹಣೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಲಾಯಿತು. ನಂತರ ನಡೆದ ಪ್ರಾಯೋಗಿಕ ಅಧಿವೇಶನದಲ್ಲಿ ಅಣಬೆ ಉತ್ಪಾದನೆಯ ವಿವಿಧ ಹಂತಗಳನ್ನು ನೇರವಾಗಿ ಪ್ರದರ್ಶಿಸಿ, ಭಾಗವಹಿಸಿದವರಿಗೆ ಪ್ರಾಯೋಗಿಕ ಅನುಭವ ಕಲ್ಪಿಸಲಾಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲ ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.