
ಮೈಸೂರು; ದಕ್ಷಿಣ ಭಾರತದ ಚಲನಚಿತ್ರ ರಂಗದ ಅನಭಿಷಕ್ತ ಗಾನಸಾಮ್ರಾಜ್ಞಿ ಎಸ್. ಜಾನಕಿಯವರ ಅಗಲುವಿಕೆ ಸಾಂಸ್ಕೃತಿಕ ಲೋಕಕ್ಕೆ ಆದ ಬಹುದೊಡ್ಡ ನಷ್ಟವಾಗಿದೆ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂಲತಃ ಆಂಧ್ರಪ್ರದೇಶದವರಾದ ಶ್ರೀಮತಿ ಜಾನಕಿಯವರು ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಮೊದಲಾದ ದೇಶ ವಿದೇಶಗಳ ಹಲವಾರು ಭಾಷೆಗಳ ಸುಮಾರು 48,000ಕ್ಕೂ ಹೆಚ್ಚು ಗೀತೆಗಳಿಗೆ ಅವರ ಸುಮಧುರ ಕಂಠದಿAದ ಜೀವ ತುಂಬಿದ ಅಪ್ರತಿಮ ಕಲಾವಿದರು ಎಂದು ಬಣ್ಣಿಸಿದ್ದಾರೆ.
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅವರಿಗೆ ಲಭಿಸಿದ ಪ್ರಶಸ್ತಿಗಳು ಅಸಂಖ್ಯಾತ. ಪ್ರಶಸ್ತಿ ನೀಡಿಕೆಯಲ್ಲಿ ದಕ್ಷಿಣ ಭಾರತದ ಕಲಾವಿದರನ್ನು ಕಡಗಣಿಸಲಾಗುತ್ತಿದೆಯೆಂಬ ಕಾರಣಕ್ಕಾಗಿ ತಮಗೆ ಲಭಿಸಿದ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಗೌರವದಿಂದಲೇ ನಿರಾಕರಿಸಿದ ಸ್ವಾಭಿಮಾನಿಗಳು. ಬಹುದೊಡ್ಡ ಕಲಾವಿದರು. ಅಷ್ಟೇ ಸರಳರು, ನಿಗರ್ವಿಗಳು. ಮಗನ ಅಗಲುವಿಕೆಯಿಂದ ಜರ್ಝರಿತರಾಗಿದ್ದರು. ನಿಜಕ್ಕೂ ಅವರೊಬ್ಬರು ನಾದಲೋಕದ ವಿಸ್ಮಯ. ಪರಮ ದೈವಭಕ್ತರಾಗಿದ್ದರು. ಜೀವನದ ಸಂಧ್ಯಾಸಮಯವನ್ನು ಮೈಸೂರಿನಲ್ಲಿ ಕಳೆಯಲು ಆಯ್ಕೆ ಮಾಡಿಕೊಂಡಿದ್ದು ಈ ನೆಲದೊಂದಿಗಿನ ಅವರ ಬಾಂಧವ್ಯ. ಅವರ ಅಗಲುವಿಕೆಯಿಂದ ಸಂಗೀತಲೋಕದಲ್ಲಿ ಒಂದು ತೆರನಾದ ನಿರ್ವಾತ ಉಂಟಾಗಿದೆಯೆAದರೆ ಅತಿಶಯೋಕ್ತಿಯಲ್ಲ.
ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದ ಸದಸ್ಯರಿಗೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಹೇಳಿದ್ದಾರೆ.