
ಮೈಸೂರು: ತಾಲ್ಲೂಕಿನ ಗುಡುಮಾದನಹಳ್ಳಿ ಬಳಿ ಉದ್ದೇಶಿತ ನಿಮ್ಹಾನ್ಸ್ ಆಸ್ಪತ್ರೆ ಘಟಕದ ಕಾಮಗಾರಿ ಆರಂಭಿಸಬೇಕು ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಜಿಲ್ಲಾಡಳಿತವು ಈಗಾಗಲೇ ಸುಮಾರು 20 ಎಕರೆ ಭೂಮಿಯನ್ನು ಹಸ್ತಾಂತರಿಸಿದ್ದು, ಈ `ವೇಳೆಗೆ ಕಟ್ಟಡ ಕಾಮಗಾರಿ ಆರಂಭವಾಗಬೇಕಾಗಿತ್ತು. ಆದರೆ, ಗುತ್ತಿಗೆದಾರರು ಇನ್ನೂ ಕಾಮಗಾರಿ ಪ್ರಾರಂಭಿಸದಿರುವುದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆ ಸ್ಥಾಪನೆಯಾದರೆ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಲಕ್ಷಾಂತರ ನಾಗರಿಕರಿಗೆ, ಕಾರ್ಮಿಕ ವರ್ಗಕ್ಕೆ, ಕೈಗಾರಿಕಾ ಕ್ಷೇತ್ರದ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉನ್ನತ ಮಟ್ಟದ ಮಾನಸಿಕ ಆರೋಗ್ಯ ಹಾಗೂ ನರರೋಗ ಚಿಕಿತ್ಸಾ ಸೇವೆಗಳು ಸ್ಥಳೀಯವಾಗಿ ಲಭ್ಯವಾಗಲಿವೆ. ಇದರಿಂದ ಬೆಂಗಳೂರಿನAತಹ ದೂರದ ಆಸ್ಪತ್ರೆಗಳಿಗೆ ತೆರಳಿ ಹೆಚ್ಚಿನ ಸಮಯ ಮತ್ತು ವೆಚ್ಚವನ್ನು ಭರಿಸುವ ಅನಿವಾರ್ಯತೆ ತಪ್ಪಲಿದೆ. ಹೀಗಾಗಿ ರಾಜ್ಯ ಸರ್ಕಾರವು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.