Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹಾರಾಣಿ ಟ್ರೋಫಿ ಟಿ20 ಎರಡನೇ ಸೀಸನ್ ಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡ ಪ್ರಕಟ, ಶುಭಾ ಸತೀಶ್ ಗೆ ನಾಯಕತ್ವ


ಮೈಸೂರು; ಮೈಸೂರು ವಾರಿಯರ್ಸ್ ಫ್ರಾಂಚೈಸಿಯ ಮಾಲೀಕರಾದ ಎನ್‌ಆರ್ ಗ್ರೂಪ್, ಮಹಾರಾಣಿ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಮುಂಬರುವ ಸರಣಿಗಾಗಿ ತಂಡ ಹಾಗೂ ನಾಯಕಿಯನ್ನು ಘೋಷಿಸಿದ್ದು, ರಾಜ್ಯದ ಪ್ರತಿಭಾವಂತ ಆಟಗಾರ್ತಿ ಶುಭಾ ಸತೀಶ್ ಗೆ ನಾಯಕತ್ವ ಹೊಣೆ ನೀಡಲಾಗಿದೆ.
ಭಾರತ ತಂಡದ ಮಾಜಿ ಆಟಗಾರ್ತಿ ಕರುಣಾ ಜೈನ್ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ತಂಡವು ಕಠಿಣ ತರಬೇತಿಯಲ್ಲಿ ನಿರತವಾಗಿದೆ.
ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡದ ವಿಶ್ವಕಪ್ ವಿಜೇತ ನಾಯಕಿ ದೀಪಿಕಾ ಟಿ.ಸಿ. ಅವರು ಮೈಸೂರು ವಾರಿಯರ್ಸ್ ತಂಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮುಂಬರುವ ಸರಣಿಗೆ ಶುಭ ಹಾರೈಸಿದರು.
ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ ಮಾತನಾಡಿ, “ಮೈಸೂರು ವಾರಿಯರ್ಸ್ನ ಉದ್ದೇಶ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ, ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ವೃತ್ತಿಪರ ವೇದಿಕೆಯಲ್ಲಿ ಮಿಂಚಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಮೊದಲ ಸೀಸನ್ ಗೆ ಸಿಕ್ಕ ಪ್ರತಿಕ್ರಿಯೆ ನಮಗೆ ಪ್ರೋತ್ಸಾಹ ನೀಡಿದ್ದು, ಈ ವರ್ಷದ ತಂಡವು ಮತ್ತಷ್ಟು ಯುವತಿಯರು ಕ್ರಿಕೆಟ್ ಕಡೆಗೆ ಆಕರ್ಷಿತರಾಗಲು ಪ್ರೇರಣೆಯಾಗಲಿದೆ ಎಂಬ ವಿಶ್ವಾಸವಿದೆ” ಎಂದರು.
ತಂಡದ ನಾಯಕಿ ಶುಭಾ ಸತೀಶ್ ಮಾತನಾಡಿ, “ಈ ಬಾರಿ ನಾವು ಸಂಪೂರ್ಣವಾಗಿ ಸಜ್ಜಾಗಿದ್ದು, ಕಪ್ ಗೆಲ್ಲಲು ಕಠಿಣ ತರಬೇತಿ ಪಡೆದಿದ್ದೇವೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬದ್ಧರಾಗಿದ್ದು, ನಾವು ಭಯವಿಲ್ಲದ ಪಾಸಿಟಿವ್ ಕ್ರಿಕೆಟ್ ಆಡಲಿದ್ದೇವೆ. ಮಹಿಳಾ ಕ್ರಿಕೆಟ್ ಮೇಲಿಟ್ಟ ನಂಬಿಕೆಗಾಗಿ ಮ್ಯಾನೇಜ್ ಮೆಂಟ್ ಗೆ ಧನ್ಯವಾದಗಳು. ಈ ಬಾರಿ ಮೈಸೂರಿಗೆ ಟ್ರೋಫಿ ತರುವುದೇ ನಮ್ಮ ಏಕೈಕ ಗುರಿ” ಎಂದರು.
ಮುಖ್ಯ ತರಬೇತುದಾರರಾದ ಕರುಣಾ ಜೈನ್ ಮಾತನಾಡಿ, “ತಂಡವು ಅತ್ಯುತ್ತಮವಾಗಿ ಸಿದ್ಧವಾಗಿದೆ. ಪ್ರತಿಯೊಬ್ಬ ಆಟಗಾರ್ತಿಯೂ ತರಬೇತಿ ಶಿಬಿರದಲ್ಲಿ ಕಠಿಣ ಶ್ರಮ ವಹಿಸಿದ್ದಾರೆ. ಅನುಭವಿ ಹಾಗೂ ಯುವ ಆಟಗಾರ್ತಿಯರ ಸಮತೋಲನ ನಮ್ಮ ತಂಡದಲ್ಲಿದೆ. ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ, ಪಾಸಿಟಿವ್ ಕ್ರಿಕೆಟ್ ಆಡುವ ಭರವಸೆ ನಮಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಹಾರಾಣಿ ಟ್ರೋಫಿ ಟಿ20 2026 ಟೂರ್ನಿಲ್ಲಿ ಈ ಬಾರಿ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಮೈಸೂರು ಸೇರಿದಂತೆ ಒಟ್ಟು ನಾಲ್ಕು ಫ್ರಾಂಚೈಸಿಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯ ಪಂದ್ಯಗಳು ಜುಲೈ 22 ರಿಂದ ಆಗಸ್ಟ್ 2 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.