
ಮೈಸೂರು: ನಗರದ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಹಾಗೂ ಸಮರ್ಥನಂ ವಿಶೇಷ ಚೇತನರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ, ಏಕತಾರಿ ಸಾಂಸ್ಕöತಿಕ ಸಂಘಟನೆ, ಮೈಸೂರು ಪ್ರಸ್ತುತಪಡಿಸಿದ ರಂಗಗೀತೆಗಳ ಯಾತ್ರೆ ಕಾರ್ಯಕ್ರಮವು ಜೆಎಸ್ಎಸ್ ಟಿ ಐ ಕ್ಯಾಂಪಸ್ನಲ್ಲಿರುವ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಆವರಣದಲ್ಲಿ ನಡೆಯಿತು.
ರಂಗಭೀಷ್ಮ ಬಿ.ವಿ. ಕಾರಂತ್ ಹಾಗೂ ಡಾ. ಹೆಚ್. ಜನಾರ್ಧನ್ (ಜನ್ನಿ) ಅವರು ರಾಗ ಸಂಯೋಜಿಸಿರುವ ಆಯ್ದ ರಂಗಗೀತೆಗಳನ್ನು ಏಕತಾರಿ ತಂಡವು ಮನಮೋಹಕವಾಗಿ ಪ್ರಸ್ತುತಪಡಿಸಿ, ವಿಶೇಷ ಚೇತನ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಉಪಸ್ಥಿತರಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಾಯಣದ ಮಾಜಿ ನಿರ್ದೇಶಕ ಡಾ. ಹೆಚ್. ಜನಾರ್ಧನ್ (ಜನ್ನಿ) ಮಾತನಾಡಿ, ಸಂಗೀತವು ಮನಸ್ಸುಗಳನ್ನು ಬೆಸೆಯುವ ಅದ್ಭುತ ಶಕ್ತಿ ಹೊಂದಿದೆ. ರಂಗಗೀತೆಗಳು ವಿಶ್ವಪ್ರಜ್ಞೆ ಯನ್ನು ಮೂಡಿಸುತ್ತದೆ. ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಇಂತಹ ಸಾಂಸ್ಕöÈತಿಕ ಕಾರ್ಯಕ್ರಮಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಶಿವಕುಮಾರಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆಗೆ ಕಲೆ, ಸಂಗೀತ ಮತ್ತು ಸಂಸ್ಕöÈತಿಯ ಪರಿಚಯವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಜೀವನೋತ್ಸಾಹವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಅಗತ್ಯವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಏಕತಾರಿ ಸಾಂಸ್ಕöÈತಿಕ ಸಂಘಟನೆಯ ಸಂಸ್ಥಾಪಕ ಹಾಗೂ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್, ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು, ಜೆಎಸ್ಎಸ್ ಮಹಾವಿದ್ಯಾಪೀಠದ ಇಂಜಿನಿಯರ್ ವಿಭಾಗದ ಸಹಾಯಕ ನಿರ್ದೇಶಕ ಹೆಚ್.ಪಿ. ಮಲ್ಲಿಕಾರ್ಜುನ, ಕಾಲೇಜಿನ ಉದ್ಯೋಗಾಧಿಕಾರಿ ಕುಶಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳು ರಂಗಗೀತೆಗಳನ್ನು ಆಸಕ್ತಿಯಿಂದ ಆಲಿಸಿ, ಕಲಾವಿದರಿಗೆ ಭರ್ಜರಿ ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತದ ಮೂಲಕ ಸಮಾನತೆ, ಮಾನವೀಯತೆ ಹಾಗೂ ಸಾಂಸ್ಕöÈತಿಕ ಮೌಲ್ಯಗಳನ್ನು ಸಾರಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಪಾಲ್ಗೊಂಡ ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿತು.