
ಮೈಸೂರು: ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವ ಇಂದು ಜುಲೈ 29 ರಿಂದ ವಿಧಿವತ್ತಾಗಿ ಪ್ರಾರಂಭವಾಯಿತು.
ಇAದು ವ್ಯಾಸ ಪೂರ್ಣಿಮೆ. ಹಾಗಾಗಿ ಗುರು ದತ್ತಾತ್ರೇಯ ಸ್ವಾಮಿ ಹಾಗೂ ವ್ಯಾಸರು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ,ಗುರುಗಳ ಮಾತೃಶ್ರೀ ಮತ್ತು ಶಂಕರಾಚಾರ್ಯರಿಗೆ ಅರ್ಚನೆ ಮಹಾಪೂಜೆ ಮಂಗಳರಾತಿ ಮಾಡಲಾಯಿತು.
ಗುರುಪೂರ್ಣಿಮೆ ಅಂಗವಾಗಿ ಗುರುಪರಂಪರಾ ಪೂಜೆ, ವ್ಯಾಸ ಪೂಜೆ, ಪೂಜ್ಯ ಸ್ವಾಮೀಜಿಯವರ ಪಾದುಕಾ ಪೂಜೆ, ಪವಮಾನ ಹೋಮ ಹಾಗೂ ದತ್ತ ಹೋಮ ವನ್ನು ನೆರವೇರಿಸಲಾಯಿತು.
ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಈ ಎಲ್ಲಾ ಪೂಜೆಗಳನ್ನು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. ಬಳಿಕ ಭಕ್ತರನ್ನುದ್ದೇಶಿಸಿ ಮಾತನಾಡಿ,ಲೋಕ ಕಲ್ಯಾಣ ಹಾಗೂ ವಿಶ್ಚ ಶಾಂತಿಗಾಗಿ ಪ್ರಾರ್ಥಿಸಿ ಚಾತುರ್ಮಾಸ್ಯ ವ್ರತ ಪ್ರಾರಂಭಿಸಿರುವುದಾಗಿ ತಿಳಿಸಿದರು.
ನಾನು ಮಹಾಜ್ಞಾನಿ ಎಂದು ಮನುಷ್ಯರು ಮೆರೆಯುತ್ತಾರೆ. ಆದರೆ, ಆತ್ಮ ಜ್ಞಾನವೇ ಮುಖ್ಯ, ಆತ್ಮಜ್ಞಾನ ಬೋಧಿಸುವ ಗುರುವಿಗಿಂತ ಬೇರೊಬ್ಬ ಈ ಸೃಷ್ಟಿಯಲ್ಲಿ ಇಲ್ಲ ಹಾಗಾಗಿ ನೀವು ಹೇಳಿದ ಹಾಗೆ ಮಾಡುತ್ತೇನೆ ಎಂದು ಶ್ರೀರಾಮನು ಗುರು ವಶಿಷ್ಠರಿಗೆ ಹೇಳಿದ್ದನ್ನು ಎಂದು ಗುರುಪೂರ್ಣಿಮೆಯ ಮಹತ್ವವನ್ನು ಸಣ್ಣ ಕಥೆಯೊಂದಿಗೆ ತಿಳಿಸಿದರು. ಎಲ್ಲರೂ ಗುರುಸೇವೆ ಮಾಡಿ,ಗುರು ವಾಖ್ಯ ಪಾಲನೆ ಮಾಡುತ್ತಾ ಗುರು ವಾಖ್ಯದಂತೆ ನಡೆಯಬೇಕು ಎಂದು ತಿಳಿಹೇಳಿದರು.
ನಮಗೆ ಜ್ಞಾನ ನೀಡಿದ ಎಲ್ಲಾ ಗುರುಗಳನ್ನು ಪ್ರತಿ ಕ್ಷಣ ನೆನಪಿಸಿಕೊಳ್ಳಬೇಕು,ನಮಗೆ ಜ್ಞಾನಾರ್ಜನೆ ಮಾಡಿದ ಎಲ್ಲ ಗುರುಗಳಿಗೆ ನಮಿಸಿ ಸ್ಮರಿಸುವುದೇ ಗುರು ಪೂರ್ಣಿಮೆ,ಗುರು ಪರಂಪರಾ ಸ್ಮರಣೆ ಮಾಡುವುದೇ ಈ ದಿನದ ವಿಶೇಷ ಎಂದು ತಿಳಿಸಿದರು.
ಕೇವಲ ಸನ್ಯಾಸಿಗಳಷ್ಟೆ ಚಾತುರ್ಮಾಸ್ಯ ವ್ರತ ಮಾಡುವುದಲ್ಲ, ಎಲ್ಲರೂ ಕೊನೆಯಪಕ್ಷ ಎರಡು ತಿಂಗಳಾದರೂ ವ್ರತ ಮಾಡಬೇಕು ಎಂದು ಹೇಳಿದರು.
ಕೆಟ್ಟ ಮಾತುಗಳನ್ನು ಆಡದೆ, ಚಾಡಿ ಮಾತು ಕೇಳದೆ, ಕೆಟ್ಟ ಆಲೋಚನೆ ಬಿಟ್ಟು ಆಹಾರ ನಿಯಮ ಪಾಲಿಸುತ್ತಾ ಮಂತ್ರ ಪಠನ ಮಾಡಿ ಚಾತುರ್ಮಾಸ್ಯ ವ್ರತ ಮಾಡುವಂತೆ ಭಕ್ತರಿಗೆ ಸಲಹೆ ನೀಡಿದರು. ಶ್ರೀ ಗಂಡೂರಿ ದತ್ತಾತ್ರೇಯ ಶರ್ಮ ಅವರಿಗೆ ಶ್ರೀ ಗಣಪತಿ ಸಚ್ಚಿದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೆಪ್ಟೆಂಬರ್ 26ರವರೆಗೂ ವಿವಿಧ ಕಾರ್ಯಕ್ರಮ ಗಳೊಂದಿಗೆ ಶ್ರೀಗಳ ಚಾತುರ್ಮಾಸ್ಯ ವ್ರತ ಅರ್ಥಪೂರ್ಣವಾಗಿ ನೆರವೇರಲಿದೆ.