Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಹಡಪದ ಅಪ್ಪಣ್ಣನವರ ಸಂದೇಶ ಇಂದಿನ ಜಾತಿಪದ್ಧತಿ ನಿವಾರಣೆಗೆ ದಾರಿದೀಪವಾಗಿದೆ; ಆರ್.ರಘು ಕೌಟಿಲ್ಯ


ಮೈಸೂರು: ಯಾವುದೇ ಹುಟ್ಟು ಅಥವಾ ವೃತ್ತಿ ಕೀಳಲ್ಲ, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಹಡಪದ ಅಪ್ಪಣ್ಣ ಅವರ ಸಂದೇಶ ಇಂದಿನ ಜಾತಿಪದ್ಧತಿ ನಿವಾರಣೆಗೆ ದಾರಿದೀಪವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಹೇಳಿದರು.
ಬುಧವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಶ್ರಮವಹಿಸಿ ದುಡಿಯಬೇಕು (ಕಾಯಕ) ಮತ್ತು ಗಳಿಸಿದ ಶ್ರಮದ ಫಲವನ್ನು ಸಮಾಜಕ್ಕೆ ಅರ್ಪಿಸಬೇಕು (ದಾಸೋಹ) ಎಂಬ ಅವರ ತತ್ವ ಇಂದಿಗೂ ಅತ್ಯಂತ ಪ್ರಸ್ತುತ ಎಂದು ಹೇಳಿದರು.
12 ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ, ವಚನ ಸಾಹಿತ್ಯ ಮತ್ತು ಶರಣರನ್ನು ರಕ್ಷಿಸುವಲ್ಲಿ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದರು. ಅವರ ಜೀವನ ನಮಗೆ ಕಾಯಕನಿಷ್ಠೆ, ಸರಳತೆ, ಪ್ರಾಮಾಣಿಕತೆ ಮತ್ತು ಜಾತಿರಹಿತ ಸಮಾನತೆಯ ಸಂದೇಶವನ್ನು ನೀಡುತ್ತದೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ,
ಶಿವಶರಣ ಹಡಪದ ಅಪ್ಪಣ್ಣ ಸರಳತೆ ಮತ್ತು ಕಾಯಕ ನಿಷ್ಠೆಯ ಸಾಕಾರ ಮೂರ್ತಿ ಹಾಗೂ ಸಮಾನ ಸಮಾಜದ ಹರಿಕಾರ.
12 ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖ ಶರಣರು, ಬಸವಣ್ಣನವರ ನಿಜಾತ್ಮ ಹಾಗೂ ಆಪ್ತ ಕಾರ್ಯದರ್ಶಿಯಾಗಿದ್ದ ಶ್ರೀ ಹಡಪದ ಅಪ್ಪಣ್ಣನವರ ಕುರಿತು ಮಾತನಾಡಲು ನನಗೆ ಬಹಳ ಹೆಮ್ಮೆಯಾಗುತ್ತದೆ. ಅಪ್ಪಣ್ಣನವರು ಶರಣರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ಬದ್ಧರಾಗಿದ್ದದವರು ಎಂದು ಹೇಳಿದರು.
ಬಸವಣ್ಣನವರ ಜೊತೆ ನೆರಳಿನಂತೆ ಇರುತ್ತಿದ್ದ ಅಪ್ಪಣ್ಣನವರು, ಅನುಭವ ಮಂಟಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಬಸವಣ್ಣನವರು ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಅಪ್ಪಣ್ಣನವರ ಆಲೋಚನೆ ಹಾಗೂ ಸಲಹೆಗಳನ್ನು ಗೌರವಿಸುತ್ತಿದ್ದರು ಎಂದು ತಿಳಿಸಿದರು.
ಅಪ್ಪಣ್ಣನವರು ಕೇವಲ ಕಾಯಕಯೋಗಿಯಾಗಿರಲಿಲ್ಲ, ಅವರೊಬ್ಬ ಶ್ರೇಷ್ಠ ವಚನಕಾರರೂ ಆಗಿದ್ದರು. ‘ಬಸವಪ್ರಿಯ ಕೂಡಲಚನ್ನಸಂಗಮದೇವ’ ಎಂಬ ಅಂಕಿತನಾಮದಲ್ಲಿ ಸುಮಾರು 240ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿದ್ದ ಜಾತಿ ಪದ್ಧತಿ, ಅಸಮಾನತೆ ಹಾಗೂ ಮೂಢನಂಬಿಕೆಗಳನ್ನು ತಮ್ಮ ವಚನಗಳ ಮೂಲಕ ತೀವ್ರವಾಗಿ ಖಂಡಿಸಿದರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಮಾತನಾಡಿ, ಹಡಪದ ಅಪ್ಪಣ್ಣನವರು ನಿಷ್ಠೆ, ಪ್ರಾಮಾಣಿಕತೆ ಹಾಗೂ ಇಡೀ ಸಮಾಜವನ್ನು ಜಾಗೃತಗೊಳಿಸಿ ಬದಲಾಯಿಸಬೇಕು ಎಂಬ ಸ್ಪಷ್ಟ ಚಿಂತನೆಯನ್ನು ಹೊಂದಿದ್ದ ಮಹಾನ್ ವ್ಯಕ್ತಿ.
ಅವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವರ ಧರ್ಮಪತ್ನಿಯವರೂ ಕೂಡ ಪ್ರಸಿದ್ಧ ವಚನಕಾರ್ತಿಯಾಗಿದ್ದರು. ಇಂತಹ ಮಹಾನ್ ಚೇತನವು ನಮ್ಮ ಸಮಾಜದಲ್ಲಿ ಜನಿಸದೇ ಹೋಗಿದ್ದರೆ, ಸಮಾಜವು ಅಂಧಕಾರದಲ್ಲಿಯೇ ಉಳಿದು ನಾಶವಾಗುತ್ತಿತ್ತು ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್, ಅಪರ ಪ್ರಾದೇಶಿಕ ಆಯುಕ್ತ ಡಾ: ಪಿ. ಶಿವರಾಜು,
ಪರಿವರ್ತನಾ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಪಕ ಎನ್. ಧನಂಜಯ್ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಉಪಸ್ಥಿತರಿದ್ದರು.