
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿನ ವಾಟರ್ ಮ್ಯಾನ್ ಆಗಬಾರದು. ನಮ್ಮ ಕಾವೇರಿ ಭಾಗದ ಜಲಾಶಯಗಳ ನಿಜವಾದ ವಸ್ತುಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ , ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತುಕತೆಯ ಮೂಲಕವೇ ಕಾವೇರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ತಮಿಳುನಾಡಿನಲ್ಲಿರುವುದು ಕಾಂಗ್ರೆಸ್‌ಗೆ ಮಿತ್ರ ಪಕ್ಷವೇ ಅಲ್ಲವೇ? ನಿಮ್ಮ ಮಿತ್ರರಿಗೆ ಕೆ.ಆರ್.ಎಸ್‌ನಲ್ಲಿರುವ ನೀರಿಲ್ಲದ ಸ್ಥಿತಿಯನ್ನು ತಿಳಿಸಲು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಬಂಗಾರಪ್ಪನವರ ಮಾದರಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಧೈರ್ಯ ತೋರಿ, ತಮಿಳುನಾಡಿಗೆ ನೀರು ಬಿಡದಿರಲು ಸಡ್ಡು ಹೊಡೆಯಿರಿ. ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ವಾಟರ್ ಮ್ಯಾನ್ ಆಗಬಾರದು, ರಾಜ್ಯದ ಜನರ ಹಿತ ಕಾಯಲು ನೀವು ಸಿಎಂ ಆಗಿದ್ದೀರಾ. ಮೊದಲು ಕೆ.ಆರ್.ಎಸ್‌ನಲ್ಲಿ ಎಷ್ಟು ಕುಡಿಯುವ ನೀರಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನಾಯಕರನ್ನು ಜೀತದಾಳುಗಳಂತೆ ನೋಡುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಬಾಗಿಲನ್ನು ಜೀತದಾಳುಗಳಂತೆ ಕಾಯುತ್ತಿದ್ದಾರೆ. ಎರಡು-ಮೂರು ದಿನ ಕಾಯುವುದು ಸರಿ, ಆದರೆ ತಿಂಗಳುಗಟ್ಟಲೆ ಕಾಯುವುದು ನಿಮ್ಮ ಸ್ವಾಭಿಮಾನಕ್ಕೆ ತಂದ ಧಕ್ಕೆಯಲ್ಲವೇ?, ನಿಮ್ಮ ಸ್ವಾಭಿಮಾನ ಬಿಟ್ಟು ವರ್ತಿಸಬೇಡಿ. ಹೈಕಮಾಂಡ್‌ಗೆ ಸಡ್ಡು ಹೊಡೆದು ನಿಲ್ಲಿ ಎಂದು ಸವಾಲು ಹಾಕಿದರು.
ವಿಪಕ್ಷಗಳು ಹೋರಾಟ ಮಾಡುವಲ್ಲಿ ವಿಫಲವಾಗಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಟ ಮಾಡುತ್ತಿದೆ. ರಾಜ್ಯ ಸರ್ಕಾರದ ಭಂಡತನಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ವಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರವಾಗಬೇಕು ಎಂಬುದು ರಾಜ್ಯದ ಜನರ ಆಶಯವಾಗಿದೆ. ಜನರ ಈ ನಿರೀಕ್ಷೆಯನ್ನು ಹುಸಿಗೊಳಿಸದೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಘಟಿತ ಹಾಗೂ ತೀವ್ರ ಹೋರಾಟ ರೂಪಿಸುತ್ತೇವೆ ಎಂದರು.