
ಹನೂರು; ಕಾಡಾನೆ ದಾಳಿಯಿಂದ ಅರಣ್ಯ ವೀಕ್ಷಕ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ಅರಣ್ಯ ವಲಯದ ಹುಣಸೆಬಯಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ (48) ಮೃತ ದುರ್ದೆÊವಿ. ಇವರು ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರಣ್ಯ ವೀಕ್ಷಕರಾಗಿ ಸುಮಾರು 20 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಹುಣಸೆಬಯಲು ಅರಣ್ಯ ಪ್ರದೇಶದ ಕಳ್ಳ ಬೇಟೆ ತಡೆ ಶಿಬಿರದಲ್ಲಿದ್ದ ವೇಳೆ ಆನೆ ಶಬ್ದ ಕೇಳಿ ಹೊರಬಂದಾಗ ದಿಢೀರನೇ ಕಾಡಾನೆ ಎದುರಾಗಿ ದಾಳಿ ಮಾಡಿದೆ. ಅದರ ಪ್ರಹಾರದಿಂದ ತಪ್ಪಿಸಿಕೊಳ್ಳಲಾಗದೇ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಇತರ ಸಿಬ್ಬಂದಿ ಅವರನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಜೊತೆಗಿದ್ದ ಇನ್ನಿಬ್ಬರು ಸಿಬ್ಬಂದಿ ಸ್ವಲ್ಪದರಲ್ಲೇ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಮೃತ ಮಹಾದೇವಸ್ವಾಮಿ ಪತ್ನಿ ನೀಡಿರುವ ದೂರಿನಡಿ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಾದೇವಸ್ವಾಮಿ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.