
ಮೈಸೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಂಥಾಲಯದ ಸೇವೆಗಳನ್ನು ವೇಗವಾಗಿ, ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನೀಡಬೇಕು ಎಂದು ಮೈಲಿಸಾ ಅಧ್ಯಕ್ಷ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ನಗರದ ಮಾನಸಗಂಗೋತ್ರಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎಐ ಬಳಸಿಕೊಂಡು ಗ್ರಂಥಾಲಯ ಸೇವೆ ಒದಗಿಸುವ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಕ್ಕೆ ತಕ್ಕಂತೆ ನಾವು ಗ್ರಂಥಾಲಯದ ಸೇವೆಗಳನ್ನು ಉತ್ತಮ ಪಡಿಸಬೇಕು. ಓದುಗರ ಕೈಗೆ ಸುಲಭವಾಗಿ ಸಿಗುವಂತೆ ಮಾಡ ಬೇಕು. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಧಾರಿತ ಪುಸ್ತಕ ಹುಡುಕಾಟ ಮಾಡಬಹುದು. ಬಳಕೆದಾರರು ತಮ್ಮ ಪ್ರಶ್ನೆಯನ್ನು ಸಾಮಾನ್ಯ ಭಾಷೆಯಲ್ಲಿ ಕೇಳಿದರೆ, ಸಂಬAಧಿತ ಪುಸ್ತಕಗಳು, ಲೇಖನಗಳು, ಸಂಶೋಧನಾ ಪ್ರಬಂಧಗಳು ಮತ್ತು ಇ-ಸಂಪನ್ಮೂಲಗಳನ್ನು ಹುಡುಕಲು ಎಐ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಗ್ರಂಥಾಲಯದ ವೆಬ್ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ ಎಐ ಸಹಾಯವನ್ನು ಪಡೆಯಬಹುದು. ಗ್ರಂಥಾಲಯದ ಸಮಯ, ಪುಸ್ತಕ ಲಭ್ಯತೆ, ಸದಸ್ಯತ್ವ ನಿಯಮಗಳು, ಪುಸ್ತಕ ಹುಡು ಕಾಟ, ಡಿಜಿಟಲ್ ಸಂಪನ್ಮೂಲಗಳ ಮಾಹಿತಿ ಇತ್ಯಾದಿಗಳಿಗೆ ತಕ್ಷಣ ಉತ್ತರ ನೀಡುತ್ತದೆ, ಎಐ, ಪುಸ್ತಕದ ವಿಷಯವನ್ನು ಗುರುತಿಸಿ ವಿಷಯ, ಕೀವರ್ಡ್, ವರ್ಗೀಕರಣ ಮತ್ತು ಮೆಟಾಡೇಟಾ ಸಿದ್ದಪಡಿಸುವ ಕೆಲಸದಲ್ಲಿ ಗ್ರಂಥಪಾಲಕರಿಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎನ್.ಎಸ್.ಹರಿನಾರಾಯಣ್, ಡಾ.ಕೆ.ಪ್ರಕಾಶ್, ಡಾ.ಎಂ.ವಿ.ಸುನಿಲ್, ಡಾ. ಅಪ್ಪಾ ಸಾಹೇಬ್ ನಾಯಿಕಲ್ ಹಾಜರಿದ್ದರು.