
ನಂಜನಗೂಡು : ಕೇರಳದ ವೈನಾಡು ಹಾಗೂ ಜಲನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದ, ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಕಾರಣ, ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡಿನಲ್ಲಿ ಕಪಿಲ ನದಿ ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಸೋಮವಾರ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರೈತರು ನದಿಗೆ ಪೂಜೆ ಸಲ್ಲಿಸಿದರು. ನಾಡಿಗೆ ಉತ್ತಮ ಮಳೆ, ಬೆಳೆ ಆಗಲಿ ಎಂದು ಪ್ರಾರ್ಥಿಸಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸತೀಶ್ ರಾವ್, ತುಂಬಿ ಹರಿಯುತ್ತಿರುವ ಕಪಿಲಾ ನದಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಕಪಿಲ ಮಾತೆ ನಮ್ಮ ರಕ್ತದ ಕಣಕಣದಲ್ಲೂ ಇದ್ದಾಳೆ. ಆ ತಾಯಿ ನಮ್ಮ ನಾಡಿಗೆ ಮಳೆ ಬೆಳೆ ಸಮೃದ್ಧಿ ತರಲಿ. ರೈತ ಬಂಧುಗಳು ಆಘಾತದಲ್ಲಿದ್ದಾರೆ, ದಿನನಿತ್ಯ ಸಂಕಷ್ಟಗಳು ಹೆಚ್ಚಾಗುತ್ತಿವೆ. ಕಪಿಲಾ ಮಾತೆ ನಮ್ಮನ್ನು ರಕ್ಷಣೆ ಮಾಡಬೇಕು” ಎಂದು ಹೇಳಿದರು.
ಬರಗಾಲದ ನಡುವೆಯೂ ಕಪಿಲಾ ನದಿ ತುಂಬಿ ಹರಿಯುತ್ತಿದೆ. ನಾಲೆಗಳಿಗೆ ನೀರು ಬಿಡುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕಿತ್ತು. ಆದರೆ ತಮಿಳುನಾಡಿಗೆ ಸಾವಿರಾರು ಕ್ಯೂಸೆಕ್ ನೀರು ಹರಿಯುತ್ತಿದೆ” ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜು, ಬಿಳಿಗೆರೆ ಹೋಬಳಿ ಅಧ್ಯಕ್ಷ ಸಿದ್ದು, ಮೈಸೂರು ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡಯ್ಯ, ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ತಾಲ್ಲೂಕು ಉಪಾಧ್ಯಕ್ಷ ಮಹದೇವ ನಾಯಕ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ, ತಾಲ್ಲೂಕು ಅಧ್ಯಕ್ಷೆ ರತ್ನಮ್ಮ, ನಾಗಯ್ಯ, ಮಂಜು, ನಟರಾಜು, ಮಂಜುನಾಥ್, ವರದರಾಜ್, ಕುಮಾರ್, ರಮೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.